ಭಾರತ ಹೊಂದಿರುವುದಕ್ಕಿಂತ ಹೆಚ್ಚು ಪರಮಾಣು ಸಿಡಿತಲೆಗಳನ್ನು ಪಾಕಿಸ್ತಾನ ಹೊಂದಿದ್ದರೆ, ಅತ್ತ ಚೀನಾವು ನವದೆಹಲಿಗಿಂತ ಮೂರು ಪಟ್ಟು ಹೆಚ್ಚು ಸಿಡಿತಲೆಗಳನ್ನು ಹೊಂದಿರುವುದು ಬಹಿರಂಗವಾಗಿದೆ.
ಭಾರತ ಹೊಂದಿರುವ ಪರಮಾಣು ಅಸ್ತ್ರಗಳ ಸಂಖ್ಯೆ 60-80. ಆದರೆ ಪಾಕಿಸ್ತಾನ 70-90 ಸಿಡಿತಲೆಗಳನ್ನು ಹೊಂದಿದೆ ಎಂದು ಅಣು ವಿಜ್ಞಾನಿಗಳ ಬುಲೆಟಿನ್ ಬಿಡುಗಡೆ ಮಾಡಿರುವ 'ಪರಮಾಣು ಅಸ್ತ್ರಗಳ ವಿವರಣೆ-2010'ಯಲ್ಲಿ ಹೇಳಿದೆ.
ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮಲ್ಲಿನ ಪರಮಾಣು ತೋಪುಖಾನೆಗಳನ್ನು ಹೆಚ್ಚಿಸುತ್ತಿವೆ. ತಾವು ಹೊಂದಿರುವ ಪರಮಾಣು ಸಿಡಿತಲೆಗಳ ಗಾತ್ರದ ಕುರಿತು ಭಾರತ ಅಥವಾ ಪಾಕಿಸ್ತಾನ ಎರಡೂ ದೇಶಗಳು ಅಧಿಕೃತ ಮಾಹಿತಿಯನ್ನು ಸಾರ್ವಜನಿಕವಾಗಿ ಹೇಳಿಲ್ಲ ಎಂದು '1945-2010ರ ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳ ವಿವರಣೆ' ಕೈಪಿಡಿಯಲ್ಲಿ ಲೇಖಕರಾದ ರಾಬರ್ಟ್ ಎಸ್. ನೋರಿಸ್ ಮತ್ತು ಹ್ಯಾನ್ಸ್ ಎಂ. ಕೃಸ್ಟೆನೆನ್ ತಿಳಿಸಿದ್ದಾರೆ.
ಪರಮಾಣು ಸಿಡಿತಲೆಗಳನ್ನು ಅತಿ ಹೆಚ್ಚು ಹೊಂದಿರುವ ರಾಷ್ಟ್ರವಾಗಿ ರಷ್ಯಾ ಹೊರ ಹೊಮ್ಮಿದೆ. ಆ ದೇಶವು 12,000 ಸಿಡಿತಲೆಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ 9,400 ಸಿಡಿತಲೆಗಳನ್ನು ಹೊಂದಿರುವ ಅಮೆರಿಕಾ ಕಾಣಿಸಿಕೊಂಡಿದೆ.
ಫ್ರಾನ್ಸ್ 300, ಚೀನಾ 240, ಬ್ರಿಟನ್ 225 ಹಾಗೂ ಇದುವರೆಗೂ ತಾನು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದೇನೆ ಎಂದು ಘೋಷಿಸಿಕೊಳ್ಳದ ಇಸ್ರೇಲ್ 60ರಿಂದ 80 ಸಿಡಿತಲೆಗಳನ್ನು ಹೊಂದಿದೆ ಎಂದು ವಿವರಣೆ ನೀಡಲಾಗಿದೆ.
ಪಾಕಿಸ್ತಾನ, ಭಾರತ, ಇಸ್ರೇಲ್ ಮತ್ತು ಉತ್ತರ ಕೊರಿಯಾಗಳು ತಮ್ಮ ಪರಮಾಣು ತೋಪುಖಾನೆಗಳನ್ನು ಇನ್ನೂ ಸಂಪೂರ್ಣವಾಗಿ ಕಾರ್ಯಾಚರಣೆಗೆ ಮುಕ್ತಗೊಳಿಸಿಲ್ಲ ಎಂದೂ ಇದು ತಿಳಿಸಿದೆ.