ಭಯೋತ್ಪಾದನೆ ರಫ್ತು; ಕ್ಯಾಮರೂನ್‌ಗೆ ಜರ್ದಾರಿ ನೇರ ಪ್ರಶ್ನೆ
ಲಂಡನ್, ಮಂಗಳವಾರ, 3 ಆಗಸ್ಟ್ 2010( 16:12 IST )
ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿಯವರು ಬ್ರಿಟನ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಅವರಲ್ಲಿ ನೇರಾನೇರವಾಗಿ ಪ್ರಸ್ತಾಪಿಸಿ ಮಾತುಕತೆ ನಡೆಸಲಿದ್ದಾರೆ ಎಂದು ಇಸ್ಲಾಮಾಬಾದ್ ಮೂಲಗಳು ಹೇಳಿವೆ.
ಶುಕ್ರವಾರ ಚೆಕರ್ಸ್ ಶೃಂಗಸಭೆಯಲ್ಲಿ ಕ್ಯಾಮರೂನ್ ಅವರನ್ನು ಮುಖಾಮುಖಿಯಾಗಲಿರುವ ಜರ್ದಾರಿಯವರು ಎದುರೆದುರೇ ಇದನ್ನು ಕೇಳಲಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರಿಟೀಷ್ ಪ್ರಧಾನಿಯವರ ಬಕ್ಕಿಂಗ್‌ಹ್ಯಾಮ್‌ಶೈರ್‌ನಲ್ಲಿನ ಅಧಿಕೃತ ಗ್ರಾಮೀಣ ನಿವಾಸವಿರುವುದು ಚೆಕರ್ಸ್ ಎಂಬಲ್ಲಿ. ಇಲ್ಲಿ ಜರ್ದಾರಿ ಮತ್ತು ಕ್ಯಾಮರೂನ್ ಪರಸ್ಪರ ಭೇಟಿಯಾಗಲಿದ್ದಾರೆ.
ಡೇವಿಡ್ ಕ್ಯಾಮರೂನ್ ಅವರು ನೇರವಾಗಿಯೇ ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಈಗ ಜರ್ದಾರಿಯವರು ಕೂಡ ಅದನ್ನೇ ಮಾಡಲಿದ್ದಾರೆ. ನೈಜ ವಿಚಾರಗಳೇನು ಎಂಬುದನ್ನು ಕ್ಯಾಮರೂನ್ ಅವರಿಗೆ ನಾವು ಹೇಳಲಿದ್ದೇವೆ. ನಾವು ಪಡುತ್ತಿರುವ ಪಾಡನ್ನು ಅವರಿಗೆ ಕಲಿಸಿಕೊಡಲಿದ್ದೇವೆ. ಈ ಹಂತದಲ್ಲಿ ನಮ್ಮನ್ನು ಬೆಂಬಲಿಸದಿದ್ದರೆ, ಪರಿಸ್ಥಿತಿ ಎಲ್ಲಿಗೆ ತಲುಪಬಹುದು ಎಂಬುದನ್ನು ಮನವರಿಕೆ ಮಾಡಲಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿರುವುದನ್ನು ಪತ್ರಿಕೆಯೊಂದು ಉಲ್ಲೇಖಿಸಿ ವರದಿ ಮಾಡಿದೆ.
ಜುಲೈ 28ರಂದು ಭಾರತ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದ ಕ್ಯಾಮರೂನ್, ಪಾಕಿಸ್ತಾನವು ಭಾರತ, ಅಫಘಾನಿಸ್ತಾನ ಮತ್ತು ಜಗತ್ತಿನ ಇತರ ರಾಷ್ಟ್ರಗಳಿಗೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಕ್ಷಮೆ ಯಾಚಿಸಲು ಕೂಡ ಅವರು ನಂತರ ನಿರಾಕರಿಸಿದ್ದರು.