ನೇಪಾಳದ ನೂತನ ಪ್ರಧಾನಿ ಪಟ್ಟ ಗಿಟ್ಟಿಸಲು ಮಾವೋ ವರಿಷ್ಠ ಪ್ರಚಂಡ ಹಾಗೂ ಎದುರಾಳಿ ನೇಪಾಳಿ ಕಾಂಗ್ರೆಸ್‌ನ ಆರ್.ಸಿ.ಪೌಡ್ಯಾಲ್ ವಿಫಲವಾಗಿರುವ ನಿಟ್ಟಿನಲ್ಲಿ ನೇಪಾಳದಲ್ಲಿ ಸಂವಿಧಾನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದಂತಾಗಿದೆ. ಇದೀಗ ನೂತನ ಪ್ರಧಾನಿ ಆಯ್ಕೆಗಾಗಿ ನೇಪಾಳ ಸಂಸತ್ ನಾಲ್ಕನೆ ಬಾರಿ ಚುನಾವಣೆ ನಡೆಸಲು ನಿರ್ಧರಿಸಿದೆ.
22 ಪಕ್ಷಗಳ ಮೈತ್ರಿ ಕೂಟದ ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ನೇತೃತ್ವದ ಸರಕಾರ ವಜಾಗೊಂಡ ನಂತರ, ನೂತನ ಪ್ರಧಾನಿ ಆಯ್ಕೆಗಾಗಿ ಮೂರು ಬಾರಿ ಚುನಾವಣೆ ನಡೆಸಲಾಗಿತ್ತು. ಆದರೆ ಮೂರು ಬಾರಿಯೂ ಪ್ರಚಂಡ ಹಾಗೂ ಎದುರಾಳಿ ಪೌಡ್ಯಾಲ್ ಇಬ್ಬರೂ ಸ್ಪಷ್ಟ ಬಹುಮತ ಪಡೆಯಲು ವಿಫಲರಾಗಿದ್ದರು.
601 ಸದಸ್ಯ ಬಲವುಳ್ಳ ನೇಪಾಳ ಸಂಸತ್‌ನಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಲು 301 ಸದಸ್ಯರ ಬೆಂಬಲದ ಅಗತ್ಯವಿದೆ. ಇದೀಗ ನೂತನ ಪ್ರಧಾನಿ ಆಯ್ಕೆಗಾಗಿ ಆಗೋಸ್ಟ್ 6ರಂದು ಮತ್ತೆ ಚುನಾವಣೆ ನಡೆಯಲಿದೆ ಎಂದು ಸಂಸತ್ ಭವನದ ಮೂಲಗಳು ತಿಳಿಸಿವೆ.
ಪ್ರಧಾನಿಯಾಗಿ ಆಯ್ಕೆಯಾಗಲು ಒಬ್ಬ ಅಭ್ಯರ್ಥಿ ಪೂರ್ಣ ಪ್ರಮಾಣದ ಬೆಂಬಲ ಪಡೆಯಬೇಕಾಗಿದೆ. ಆದರೆ ಮಾವೋ ಪಕ್ಷದ ಪ್ರಚಂಡ ಆಗಲಿ, ಪ್ರತಿಸ್ಪರ್ಧಿ ಪೌಡ್ಯಾಲ್ ಕೂಡ ಮ್ಯಾಜಿಕ್ ಸಂಖ್ಯೆಯ ಬೆಂಬಲ ಪಡೆಯಲು ವಿಫಲರಾಗಿದ್ದಾರೆ. ಹಾಗಾಗಿ ನೇಪಾಳದಲ್ಲಿ ಪ್ರಧಾನಿ ಆಯ್ಕೆ ತ್ರಿಶಂಕು ಸ್ಥಿತಿ ತಲುಪಿದೆ.