'ಬಿಕಿನಿ ಕಿಲ್ಲರ್' ಚಾರ್ಲ್ಸ್ ಗುರ್ಮುಖ್ ಶೋಭರಾಜ್ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿರುವ ನೇಪಾಳ ಸುಪ್ರೀಂಕೋರ್ಟ್ ನಿರ್ಧಾರದ ವಿರುದ್ಧ ಪತ್ನಿ ನಿಹಿತಾ ಬಿಸ್ವಾಸ್ ಗಂಭೀರವಾಗಿ ಆರೋಪಿಸಿದ್ದು, ಅದು ನ್ಯಾಯಾಲಯ ನಿಂದನೆಯಾಗಿರುವುದಾಗಿ ಸುಪ್ರೀಂ ತರಾಟೆಗೆ ತೆಗೆದುಕೊಂಡು ವಿವರಣೆ ನೀಡುವಂತೆ ಬಿಸ್ವಾಸ್‌ಗೆ ನೋಟಿಸ್ ಜಾರಿ ಮಾಡಿತ್ತು.
ಆ ನಿಟ್ಟಿನಲ್ಲಿ 22ರ ಹರೆಯದ ನೇಪಾಳಿ ಚೆಲುವೆ ನಿಹಿತಾ ನ್ಯಾಯಾಲಯಕ್ಕೆ ಹಾಜರಾಗಿ, ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೋರ್ಟ್‌ಗೆ ತೆರಳುವ ಸಂದರ್ಭದಲ್ಲಿ ಆಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಳು. ಬಿಸ್ವಾಸ್ ನ್ಯಾಯಾಂಗ ನಿಂದನೆ ಸಂಬಂಧ ಹಾಜರಾಗಿರುವುದಾಗಿ ಕೋರ್ಟ್ ಅಧಿಕಾರಿ ಹೇಮಂತ್ ರಾವಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಸರ್ವೋಚ್ಚನ್ಯಾಯಾಲಯದ ತೀರ್ಪಿನ ವಿರುದ್ಧವೇ ಆಕ್ಷೇಪ ಎತ್ತಿದ ಪರಿಣಾಮವಾಗಿ ಬಿಸ್ವಾಸ್ ಮತ್ತು ಆಕೆಯ ತಾಯಿ ಶಾಕುಂತಲಾ ಥಾಪಾ ವಿಚಾರಣೆಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬಗ್ಗೆ ಭಾನುವಾರ ಅಪೆಕ್ಸ್ ಕೋರ್ಟ್ ಖುದ್ದು ಹಾಜರಾಗಿ ವಿವರಣೆ ನೀಡುವಂತೆಯೂ ಸೂಚಿಸಿತ್ತು.
ಸುಪ್ರೀಂಕೋರ್ಟ್ ಲಂಚ ಪಡೆದು ಈ ರೀತಿಯ ತೀರ್ಪು ನೀಡಿರುವುದಾಗಿ ಆರೋಪಿಸಿರುವ ಬಿಸ್ವಾಸ್ ವಿರುದ್ಧ ನ್ಯಾಯಾಂಗ ನಿಂದನೆ ಆಧಾರದಲ್ಲಿ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಶೋಭರಾಜ್ ಬಂಧಮುಕ್ತಕ್ಕೆ ಸಂಬಂಧಿಸಿದಂತೆ ನೇಪಾಳ ಸುಪ್ರೀಂಕೋರ್ಟ್ ಜುಲೈ 30ರಂದು ನೀಡಿದ ಅಂತಿಮ ತೀರ್ಪಿನಲ್ಲಿ, ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಆದರೆ ಸುಪ್ರೀಂಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ಚಾರ್ಲ್ಸ್ ಪತ್ನಿ ನಿಹಿತಾ ಬಹಿರಂಗವಾಗಿಯೇ ನ್ಯಾಯಾಲಯದ ವಿರುದ್ಧ ಭ್ರಷ್ಟಚಾರದ ಆರೋಪ ಹೊರಿಸಿದ್ದಳು. ಲಂಚ ಪಡೆದು ಈ ರೀತಿಯ ತೀರ್ಪು ನೀಡಿರುವುದಾಗಿ ಬಿಸ್ವಾಸ್ ಕಿಡಿಕಾರಿದ್ದಳು. ಇದೀಗ ಸುಪ್ರೀಂಕೋರ್ಟ್ ಬಿಸ್ವಾಸ್ ಆರೋಪಕ್ಕೆ ವಿವರಣೆ ನೀಡುವಂತೆ ತಿಳಿಸಿದೆ.