ಇರಾನ್ ಅಧ್ಯಕ್ಷ ಮಹಮುದ್ ಅಹಮದಿನೆಜಾದ್ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಅಧ್ಯಕ್ಷರ ಹತ್ಯೆ ಯತ್ನ ವಿಫಲವಾಗಿರುವುದಾಗಿ ಲೆಬನಾನ್ ಫ್ಯೂಚರ್ ಟೆಲಿವಿಷನ್ ವರದಿಯೊಂದು ತಿಳಿಸಿದೆ.
ಅಧ್ಯಕ್ಷ ಅಹಮದಿನೆಜಾದ್ ಅವರು ಬೆಂಗಾವಲು ಪಡೆ ವಾಹನದೊಂದಿಗೆ ಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದರು. ಆದರೆ ಅದೃಷ್ಟವಶಾತ್ ಅಧ್ಯಕ್ಷರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಾಗಿ ವರದಿ ಹೇಳಿದೆ. ಆದರೆ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಪಶ್ಚಿಮ ಇರಾನ್‌ನಲ್ಲಿ ಅಧ್ಯಕ್ಷ ಅಹಮದಿನೆಜಾದ್ ಮೇಲೆ ಹತ್ಯಾ ಯತ್ನ ನಡೆದಿರುವುದನ್ನು ಕನ್ಸರ್‌ವೇಟಿವ್ ವೆಬ್‌ಸೈಟ್ ಕೂಡ ಖಚಿತಪಡಿಸಿದೆ. ಅಹಮದಿನೆಜಾದ್ ಅವರು ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲು ತೆರಳಲುತ್ತಿದ್ದರು. ಅವರ ಕಾರು ಸಭೆ ನಡೆಯುವ ನೂರು ಮೀಟರ್ ಅಂತರದಲ್ಲೇ ಗ್ರೆನೇಡ್ ದಾಳಿ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದು ಸುಳ್ಳು ಸುದ್ದಿ: ಅಧ್ಯಕ್ಷ ಅಹಮದಿನೆಜಾದ್ ಅವರ ಮೇಲೆ ಗ್ರೆನೇಡ್ ದಾಳಿ ನಡೆದಿಲ್ಲ ಎಂದು ಅಧ್ಯಕ್ಷರ ಕಚೇರಿ ಮೂಲಗಳು ಸ್ಪಷ್ಟಪಡಿಸಿದೆ. ಅಹಮದಿನೆಜಾದ್ ಅವರ ಬೆಂಗಾವಲು ಪಡೆ ಮೇಲೆ ಗ್ರೆನೇಡ್ ದಾಳಿ ನಡೆದಿದ್ದು, ಅವರು ಹತ್ಯಾ ಯತ್ನದಿಂದ ಬಚಾವ್ ಆಗಿದ್ದರೆಂದು ಮಾಧ್ಯಮದ ವರದಿ ಬಿತ್ತರಗೊಂಡ ಬೆನ್ನಲ್ಲೇ ಈ ಇರಾನ್ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದ್ದಾರೆ.