ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿನ ರಾಜಕೀಯ ಪಕ್ಷವೊಂದರ ಪ್ರಭಾವಿ ನಾಯಕರೊಬ್ಬರ ಹತ್ಯೆ ನಡೆದ ನಂತರ ನಡೆಯುತ್ತಿರುವ ಹಿಂಸಾಚಾರಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಇದೀಗ 62ಕ್ಕೆ ತಲುಪಿದೆ ಎಂದು ವರದಿಗಳು ಹೇಳಿವೆ.
ಸೋಮವಾರ ರಾತ್ರಿ 10ಕ್ಕೂ ಹೆಚ್ಚು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮುತ್ತಾಹಿದಾ ಖ್ವಾಮಿ ಮೂಮೆಂಟ್ ಪಕ್ಷದ ರಾಜಾ ಹೈದರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದ ನಂತರ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರವೇ ಆರೋಪಿಸುತ್ತಿರುವಂತೆ ಹೈದರ್ ಹತ್ಯೆಗೆ ತಾಲಿಬಾನ್ ಭಯೋತ್ಪಾದಕರು ಮತ್ತು ನಿಷೇಧಿತ ಉಗ್ರ ಸಂಘಟನೆ ಸಿಪಾಹ್-ಇ-ಸಾಹಬಾ ಪಾಕಿಸ್ತಾನ್ (ಎಸ್ಎಸ್‌ಪಿ) ಕಾರಣರು.
ವಿಶ್ಲೇಷಕರ ಪ್ರಕಾರ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವು ಈಗಾಗಲೇ ನಲುಗುತ್ತಿರುವ ಆರ್ಥಿಕತೆಗೆ ಮತ್ತಷ್ಟು ತೊಂದರೆಯಾಗಲಿದೆ. ದೇಶದ ಪ್ರಮುಖ ಬಂದರನ್ನು ಹೊಂದಿರುವ ನಗರವಾಗಿರುವ ಕರಾಚಿ, ಸೆಂಟ್ರಲ್ ಬ್ಯಾಂಕ್ ಮತ್ತು ವಿದೇಶಿ ವಿನಿಮಯ ಕೇಂದ್ರವೂ ಆಗಿದೆ.
ಗಲಭೆಯಿಂದಾಗಿ ನಗರದಲ್ಲಿ ಹಗಲು ಹೊತ್ತು ವಹಿವಾಟುಗಳು ಬಹುತೇಕ ಸ್ಥಗಿತಕ್ಕೊಳಗಾಗುತ್ತಿದೆ. ರಾತ್ರಿ ಹೊತ್ತು ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತಿವೆ. ನಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.