ಮೂಲಭೂತವಾದಿ ಗುಂಪುಗಳಾದ ಹಿಜ್ಬುಲ್ಲಾಹ್ ಮತ್ತು ಹಮಾಸ್‌ಗಳಿಗೆ ಬೆಂಬಲ ಮತ್ತು ತನ್ನ ವಿವಾದಿತ ಪರಮಾಣು ಶಸ್ತ್ರಾಸ್ತ್ರಗಳಿಂದಾಗಿ ದಿನೇದಿನೇ ಒತ್ತಡ ಹೆಚ್ಚಿಸಿಕೊಳ್ಳುತ್ತಿರುವ ಇರಾನ್ ಇದೀಗ ಮತ್ತಷ್ಟು ಸಂಕಷ್ಟಕ್ಕೊಳಗಾಗಿದೆ. ಟೆಹ್ರಾನ್ ಬೆಂಬಲಿತ 21 ಸಂಸ್ಥೆಗಳ ಮೇಲೆ ಅಮೆರಿಕಾ ಮಂಗಳವಾರ ನಿರ್ಬಂಧ ಹೇರಿದೆ.
ಪ್ರಸಕ್ತ ಹೊಂದಿರುವ ಆರ್ಥಿಕ ನಿರ್ಬಂಧಗಳನ್ನು ನಿವಾರಿಸಲು ಇರಾನ್ ವಿವಿಧ ರೀತಿಯಲ್ಲಿ ಕಠಿಣವಾಗಿ ಯತ್ನಿಸುತ್ತಿದೆ. ಹಾಗಾಗಿ ನಾವೀಗ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಬೆಂಬಲಿಸುವ ಮತ್ತೊಂದು ಸುತ್ತಿನ ರಾಷ್ಟ್ರೀಯ ನಿರ್ಬಂಧಗಳನ್ನು ಹೇರುತ್ತಿದ್ದೇವೆ. ಇದು ನಿರಂತರ ಸಾಗುತ್ತಿರುವ ಪ್ರಕ್ರಿಯೆಯಾಗಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೀ ತಿಳಿಸಿದ್ದಾರೆ.
ಹಿಜ್ಬುಲ್ಲಾಹ್ ಸಂಘಟನೆಗೆ ಆರ್ಥಿಕ ಸಹಕಾರ ನೀಡುತ್ತಿರುವವರಲ್ಲಿ ಇರಾನ್ ಪ್ರಮುಖವೆಂದು ಹೇಳಿರುವ ಅಮೆರಿಕಾ, ಈ ದೇಶವನ್ನು ಬಹುಕಾಲದಿಂದ ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ರಾಷ್ಟ್ರ ಎಂದು ಗುರುತಿಸಿಕೊಂಡು ಬಂದಿದೆ.
ಅಂತಾರಾಷ್ಟ್ರೀಯ ಆರ್ಥಿಕತೆ ಮತ್ತು ವಾಣಿಯ್ ವ್ಯವಸ್ಥೆಯಲ್ಲಿ ಮೂಲೆಗುಂಪಾಗುತ್ತಿರುವುದು ಹೆಚ್ಚುತ್ತಿದ್ದಂತೆ ಇರಾನ್ ಸರಕಾರವು ನಿರ್ಬಂಧಗಳನ್ನು ಸಡಿಲಗೊಳಿಸಲು ಕೂಡ ಹೆಚ್ಚು ಶ್ರಮವಹಿಸುತ್ತದೆ. ಅದಕ್ಕಾಗಿ ಸರಕಾರವು ತನ್ನ ಸಂಸ್ಥೆಗಳನ್ನು ನಕಲಿ ಹೆಸರುಗಳಲ್ಲಿ ಕಾರ್ಯಾಚರಣೆಗೆ ಬಿಡುತ್ತವೆ. ಆ ಮೂಲಕ ಅದು ಇರಾನ್ ದೇಶದ್ದು ಎಂಬುದು ಗಮನಕ್ಕೆ ಬರದಂತೆ ನಡೆಸಿಕೊಂಡು ಹೋಗಲು ಯತ್ನಿಸುತ್ತದೆ ಎಂದು ಅಮೆರಿಕಾ ತಿಳಿಸಿದೆ.
ಈಗ ನಾವು ಅಂತಹ ಕೆಲವು ಸಂಸ್ಥೆಗಳನ್ನು ಗುರುತಿಸಿ ಅವುಗಳ ಮೇಲೆ ನಿರ್ಬಂಧ ಹೇರಿದ್ದೇವೆ. ಇಂತಹ ಹತ್ತು ಹಲವು ಸಂಸ್ಥೆಗಳು ಹುಟ್ಟಿಕೊಳ್ಳಬಹುದು ಎಂದಿರುವ ಅಮೆರಿಕಾ, ಈಗ ನಿಷೇಧಕ್ಕೊಳಗಾಗಿರುವ ಕಂಪನಿಗಳು ಬೆಲೂರಾಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಲೂಕ್ಸೆಂಬರ್ಗ್ ಮುಂತಾದೆಡೆ ಕಾರ್ಯಾಚರಿಸುವಂತೆ ಸೂಚನೆ ಪಡೆದುಕೊಂಡಿದ್ದವು.