ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನ ಅರೆಸೇನಾ ಪಡೆಯ ಪೇಶಾವರ ವಿಭಾಗದ ಮುಖ್ಯಸ್ಥ ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದ್ದು, ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಎಫ್‌ಸಿ ಚೌಕ್ ಸಮೀಪದ ಫ್ರಂಟಿಯರ್ ಕಾನ್ಸ್‌ಟಾಬುಲಾರಿ ಮುಖ್ಯಕಚೇರಿ ಹತ್ತಿರ ಅರೆಸೇನಾ ಪಡೆಯ ಮುಖ್ಯಸ್ಥ ಸಿಫ್ವತ್ ಘಾಯೂರ್ ಅವರ ಕಾರನ್ನು ಗುರಿಯಾಗಿರಿಸಿ ಆತ್ಮಹತ್ಯಾ ಬಾಂಬರ್ ಈ ದಾಳಿ ನಡೆಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ದಾಳಿಯಲ್ಲಿ ಸಿಫ್ವತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ದಾರಿಯಲ್ಲಿ ಸಾಗುತ್ತಿದ್ದ ಹಲವರು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರ ಪರಿಣಾಮ ಮೂರು ಕಾರುಗಳು ಭಸ್ಮವಾಗಿ ಹೋಗಿವೆ. ಸಮೀಪ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.