ಸುಮಾರು 150 ಮೀಟರ್ ಆಳದ ಕಂದಕಕ್ಕೆ ಕಾರು ಉರುಳಿ ಬಿದ್ದರೂ ಕೂಡ ಯಾವುದೇ ಪ್ರಾಣಾಪಾಯವಿಲ್ಲದೆ ಜರ್ಮನಿಯ ಜೋಡಿಯೊಂದು ಪವಾಡ ಸದೃಶವಾಗಿ ಪಾರಾದ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಬುಧವಾರ ನಡೆದಿದೆ.
ಯುವ ಜೋಡಿಯೊಂದು ಜುಮ್‌ಸ್ಟೇಯ್ಸ್‌ನ ಉತ್ತರ ಗ್ರ್ಯಾಂಪಿಯನ್ಸ್ ರಸ್ತೆಯಲ್ಲಿ ಕಾರನ್ನು 30ರ ಹರೆಯದ ಮಹಿಳೆ ಚಲಾಯಿಸುತ್ತಿದ್ದ ವೇಳೆ ಅತಿಯಾದ ವೇಗದಿಂದ ಹಿಡಿತ ತಪ್ಪಿದ ಪರಿಣಾಮ ಕಾರು ಸುಮಾರು 150 ಮೀಟರ್ ಆಳದ ಕಂದಕಕ್ಕೆ ಬಿದ್ದಿರುವುದಾಗಿ ಹೆರಾಲ್ಡ್ ಸನ್ ವರದಿ ತಿಳಿಸಿದೆ.
ಕಾರು ಉರುಳಿ ಕಂದಕದ ಬುಡಕ್ಕೆ ಹೋಗಿ ಬಿದ್ದಿರುವುದಾಗಿ ಪೊಲೀಸ್ ವಕ್ತಾರರು ವಿವರಿಸಿದ್ದಾರೆ. ಆದರೆ ಈ ಅವಘಡದಲ್ಲಿ 34ರ ಹರೆಯದ ವ್ಯಕ್ತಿ ಪ್ರಯತ್ನಪಟ್ಟು ಹೊರಬಂದಿದ್ದರು. ಆದರೆ ಮಹಿಳೆ ಕಾರಿನ ಒಳಗೆ ಸಿಲುಕಿಕೊಂಡಿದ್ದಳು. ನಂತರ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಆಕೆಯನ್ನು ಹೊರತೆಗೆದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.