ಎಂಕ್ಯೂಎಂ ಪಕ್ಷದ ಹಿರಿಯ ಶಾಸಕ ರೆಜಾ ಅವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ಗುಂಡಿಕ್ಕಿ ಹತ್ಯೆಗೈದ ನಂತರ ಪಾಕಿಸ್ತಾನದ ಪ್ರಮುಖ ನಗರವಾದ ಕರಾಚಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಘಟನೆಯಲ್ಲಿ 81 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಸಿಂಧ್ ಸರಕಾರ ಕಂಡಲ್ಲಿ ಗುಂಡಿಕ್ಕಲು ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.
ಸಿಂಧ್ ಪ್ರಾಂತ್ಯದ ಹಿರಿಯ ಶಾಸಕರಾಗಿರುವ ರೆಜಾ ಹೈದರ್ ಅವರು ತಮ್ಮ ಮಿತ್ರ ಶವಸಂಸ್ಕಾರದ ಪ್ರಾರ್ಥನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ರೆಜಾ ಅವರ ಅಂಗರಕ್ಷಕ ಕೂಡ ಬಲಿಯಾಗಿದ್ದರು.
ರೆಜಾ ಅವರ ಹತ್ಯೆಯ ಘಟನೆ ತಿಳಿಯುತ್ತಿದ್ದಂತೆಯೇ ಕರಾಚಿ ಸೇರಿದಂತೆ ದೇಶದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 80ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೀಗ ಉದ್ವಿಗ್ನ ಸ್ಥಿತಿಯನ್ನು ಹತೋಟಿಗೆ ತರಲು ಕಂಡಲ್ಲಿ ಗುಂಡಿಕ್ಕಲು ಸರಕಾರ ಆದೇಶ ನೀಡಿದೆ.
ಹಿಂಸಾಚಾರದಲ್ಲಿ ನಗರದ ಅಂಗಡಿ, ಮನೆಗಳಿಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿ ಅಟ್ಟಹಾಸಗೈಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಸುಮಾರು 10ಬಿಲಿಯನ್‌ನಷ್ಟು ನಷ್ಟ ಉಂಟಾಗಿದೆ ಎಂದು ಆಲ್ ಕರಾಚಿ ಟ್ರೇಡರ್ಸ್ ಅಸೋಸಿಯೇಷನ್ ಆರೋಪಿಸಿದೆ. ಹಾಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.