ಕಳೆದ ನವೆಂಬರ್ ತಿಂಗಳಲ್ಲಿ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಏರ್ಪಡಿಸಿದ್ದ ಔತಣಕೂಟಕ್ಕೆ ಆಹ್ವಾನವಿಲ್ಲದೆ ಭಾಗವಹಿಸಿ ಎಲ್ಲರಿಗೂ ಮಂಕುಬೂದಿ ಎರಚಿದ ಸುದ್ದಿ ತಿಳಿದೇ ಇದೆ. ಅಂದು ಉಟ್ಟಿದ್ದ ಕೆಂಪು ಸೀರೆಯನ್ನು ಹರಾಜಿಗೆ ಹಾಕುವ ಮೂಲಕ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ.
ನವೆಂಬರ್ 24ರಂದು ತನ್ನ ಗಂಡ ತಾರೆಕ್ ಜತೆ ಪಾರ್ಟಿಗೆ ಆಗಮಿಸಿ ಅಧ್ಯಕ್ಷ ಒಬಾಮಾ ಮತ್ತು ಮನಮೋಹನ್ ಸಿಂಗ್ ಅವರಿಗೆ ಹಸ್ತಲಾಘವ ನೀಡಿದ್ದ ಮೈಕೆಲ್ ಸಲಾಹಿ, ಅಂದು ತಾನು ಉಟ್ಟಿದ್ದ ಕೆಂಪು ಸೀರೆಯನ್ನು ಹರಾಜು ಹಾಕುತ್ತೇನೆ ಎಂದು ತಿಳಿಸಿದ್ದಾಳೆ.
ಕಳೆದ ವರ್ಷ ಈ ಗೇಟ್ ಕ್ರಾಶ್ ನಡೆದ ಅವಧಿಯಲ್ಲಿಯೇ ಇದರ ಹರಾಜು ನಡೆಯುತ್ತದೆ. ಹರಾಜಿನಲ್ಲಿ ಬಂದ ಹಣವನ್ನು ಹೈಟಿ ಭೂಕಂಪ ಸಂತ್ರಸ್ತರಿಗೆ ನೀಡಲಾಗುತ್ತದೆ ಎಂದು ಸಲಾಹಿ ಸುದ್ದಿಸಂಸ್ಥೆಯೊಂದಕ್ಕೆ ವಿವರಣೆ ನೀಡಿದ್ದಾಳೆ.
'ದಿ ರಿಯಲ್ ಹೌಸ್ ವೈವ್ಸ್ ಆಫ್ ಡಿಸಿ' ಎಂಬ ಟಿವಿ ಕಾರ್ಯಕ್ರಮದಲ್ಲಿ ಇದನ್ನು ಹರಾಜು ಹಾಕಲಾಗುತ್ತಿರುವುದು ವಿಶೇಷ. ಸಲಾಹಿ ದಂಪತಿಯೂ ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತರ ನಾಲ್ಕು ದಂಪತಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಧ್ಯಕ್ಷರು, ಅವರ ಕುಟುಂಬ ಮತ್ತು ಶ್ವೇತಭವನಕ್ಕೆ ಭೇಟಿ ನೀಡುವ ಗಣ್ಯರನ್ನು ರಕ್ಷಿಸುವ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಮೆರಿಕಾ ರಹಸ್ಯ ಸೇವಾದಳವು ಗೇಟ್ ಕ್ರಾಶ್ ಘಟನೆಯ ಹೊಣೆ ಹೊತ್ತುಕೊಂಡಿತ್ತು. ಪ್ರವೇಶ ದ್ವಾರದಲ್ಲಿ ರಹಸ್ಯ ಸೇವಾದಳದ ಜತೆ ತನ್ನ ಸಿಬ್ಬಂದಿಗಳನ್ನು ನೇಮಿಸದೇ ಇದ್ದುದಕ್ಕೆ ಅಧಿಕಾರಿಯೊಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಪ್ರಸಕ್ತ ಪ್ರಕರಣವು ತನಿಖೆಯ ಹಂತದಲ್ಲಿದೆ.
ಗರಿಷ್ಠ ಭದ್ರತೆಯಿರುವ ಶ್ವೇತಭವನಕ್ಕೆ ಗಣ್ಯರ ಸಮಾರಂಭವೊಂದರಲ್ಲಿ ಆಹ್ವಾನರಹಿತರು ಪಾಲ್ಗೊಂಡಿರುವ ಪ್ರಸಂಗ ತೀವ್ರ ವಿವಾದಕ್ಕೆ ಕಾರಣವಾಗಿತ್ತು.