ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೊಳಗಾಗಿರುವ ಧಾರ್ಮಿಕ ಸಂಘಟನೆಗಳು ನೆರೆ, ಭೂಕಂಪ ಮುಂತಾದ ನೈಸರ್ಗಿಕ ಪ್ರಕೋಪಗಳನ್ನು ಬಳಸಿಕೊಂಡು ಜನಸಾಮಾನ್ಯರ ಒಲವನ್ನು ಗಿಟ್ಟಿಸಿಕೊಳ್ಳುತ್ತವೆ. ಅದೇ ರೀತಿ ಈ ಬಾರಿಯೂ ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಮೂಲಕ ಜನರಿಗೆ ಹತ್ತಿರವಾಗಲು ಭಯೋತ್ಪಾದಕ ಸಂಘಟನೆಗಳು ಯತ್ನಿಸಿವೆ ಎಂಬ ವರದಿಗಳು ಬಂದಿವೆ.
ಉತ್ತರ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಇತ್ತೀಚೆಗಷ್ಟೇ ಭಾರೀ ಪ್ರಮಾಣದಲ್ಲಿ ಮಳೆ ಬಂದ ಕಾರಣ ಪ್ರವಾಹ ಪರಿಸ್ಥಿತಿ ನೆಲೆಸಿತ್ತು. ಈ ಸಂದರ್ಭದಲ್ಲಿ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವ್ ಮತ್ತು ಜಮಾತ್ ಇ ಇಸ್ಲಾಮಿ ಸಂಘಟನೆಯ ಅಲ್-ಖಿದ್ಮಾತ್ ವಿಭಾಗವು ಸಕ್ರಿಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದವು.
ಚಾರ್ಸದ್ದಾ ಮತ್ತು ನೌಶೇರಾ ಪಟ್ಟಣಗಳ ರಸ್ತೆ ಬದಿಗಳಲ್ಲಿ ನಿರಾಶ್ರಿತರ ಶಿಬಿರಗಳನ್ನು ತೆರೆದಿದ್ದ ಮೇಲಿನ ಎರಡೂ ಸಂಘಟನೆಗಳು, ತಾವು ಸಂಗ್ರಹಿಸಿದ ನಿಧಿಗಳನ್ನು ಬಳಸಿಕೊಂಡು ಆಹಾರ ಮತ್ತು ವಸತಿಗಳನ್ನು ಸಂತ್ರಸ್ತರಗಿಗೆ ಒದಗಿಸುತ್ತಿದ್ದರು.
ವಾಯುವ್ಯ ಪಾಕಿಸ್ತಾನದಲ್ಲಿ ಮೂರು ಕೋಟಿಗೂ ಹೆಚ್ಚು ಮಂದಿ ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿರುವ ಪ್ರದೇಶಗಳಲ್ಲಿ ಜಮಾತ್ ಉದ್ ದಾವಾದ ಸುಮಾರು 2,000 ಸ್ವಯಂಸೇವಕರು ಸಂತ್ರಸ್ತರಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಲಾಗಿದೆ.
ಲಷ್ಕರ್ ಇ ತೋಯ್ಬಾದ ಹೊಸ ರೂಪ ಎಂದು ಜಮಾತ್ ಉದ್ ದಾವಾ ಸಂಘಟನೆಯತ್ತ 2008ರ ಮುಂಬೈ ದಾಳಿ ಆರೋಪವನ್ನು ಭಾರತ ಮಾಡುತ್ತಾ ಬಂದಿದೆ. ಲಷ್ಕರ್ ಮೇಲೆ 2002ರಲ್ಲಿ ಫರ್ವೇಜ್ ಮುಶರಫ್ ಅಧ್ಯಕ್ಷರಾಗಿದ್ದಾಗ ನಿಷೇಧ ಹೇರಲಾಗಿತ್ತು.
2005ರಲ್ಲಿ ಪಾಕಿಸ್ತಾನದ ಉತ್ತರ ಭಾಗದಲ್ಲಿ ಸಂಭವಿಸಿದ ಭೂಕಂಪದಲ್ಲಿ 70,000 ಮಂದಿ ಸಾವನ್ನಪ್ಪಿದಾಗಲೂ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿತ್ತು. ಆಗಲೂ ಭಯೋತ್ಪಾದಕ ಸಂಘಟನೆಗಳು ಜನತೆಗೆ ಸಹಕಾರ ನೀಡಿದ್ದವು.