ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಂಡನನ್ನು ಬಿಟ್ಟದ್ದಕ್ಕೆ ಮೂಗು, ಕಿವಿ ಕೊಯ್ದ ತಾಲಿಬಾನಿಗಳು! (Afghan Women | Taliban | Afghanistan | Bibi Aisha)
Bookmark and Share Feedback Print
 
ತಾವೇ ನಿಜವಾದ ಮುಸ್ಲಿಮರು ಮತ್ತು ನಾವು ಇಸ್ಲಾಂ ವಿಶ್ವವನ್ನೇ ಸೃಷ್ಟಿಸುತ್ತೇವೆ ಎಂದು ಹೊರಟವರು ತಾಲಿಬಾನ್ ಭಯೋತ್ಪಾದಕರು. ಅವರ ನಿಘಂಟಿನಲ್ಲಿ ಕರುಣೆ ಅಥವಾ ಮಾನವೀಯತೆ ಎಂಬಂತಹ ಸಮಾನಾರ್ಥಕ ಪದಗಳಿಗೆ ಅರ್ಥವೇ ಇಲ್ಲ. ಅವರಿಗೆ ಪ್ರಿಯವಾಗುವ ಹೆಸರು ಕ್ರೂರತೆ, ಅದನ್ನೇ ಅರೆದು ಕುಡಿದು ತಾವು ಎಲ್ಲವನ್ನೂ ಸಾಧಿಸುತ್ತೇವೆ ಎಂದು ಹೊರಟ ಧರ್ಮಾಂಧರವರು.
PR

ಈ ಮೊದಲು ಹಾಲೆರೆದು ಪೋಷಿಸಿದ ಅಮೆರಿಕಾ ಈಗ ತಾಲಿಬಾನಿಗಳಿಂದ ಜಗತ್ತಿಗೆ ಭಾರೀ ಕಂಟಕ ಕಾದಿದೆ ಎಂದು ಇತರ ಕೆಲವು ರಾಷ್ಟ್ರಗಳೊಂದಿಗೆ ಸೇರಿಕೊಂಡು ತನ್ನ ಕೂಸನ್ನೇ ತರಿಯಲು ಟೊಂಕ ಕಟ್ಟಿ ನಿಂತಿರುವುದು ಗೊತ್ತೇ ಇದೆ. ಭಾಗಶಃ ಅದರಲ್ಲಿ ಯಶಸ್ವಿಯಾದಂತೆ ಅನಿಸುತ್ತದೆಯಾದರೂ, ನಾಯಿಕೊಡೆಗಳಂತೆ ತಾಲಿಬಾನಿಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಇದು ಆತಂಕದ ವಿಚಾರವೇ ಸರಿ.

ಇಂತಹ ಹೊತ್ತಿನಲ್ಲಿ ಕಳೆದ ಹಲವು ವರ್ಷಗಳಿಂದ ಕದನಭೂಮಿಯಾಗಿರುವ ಅಫಘಾನಿಸ್ತಾನವನ್ನು ಆ ನೆಲದ ಯೋಧರ ಕೈಗೆ ಕೊಟ್ಟು ಹೋಗಲು ಅಮೆರಿಕಾ ಚಿಂತನೆ ನಡೆಸುತ್ತಿದೆ. ಅದೇ ಹೊತ್ತಿಗೆ ಆ ದೇಶದಲ್ಲಿ ಈಗಲೂ ನಡೆಯುತ್ತಿರುವ ಹತ್ತು ಹಲವು ಕ್ರೂರತೆಗಳನ್ನು ಬಯಲಿಗೆಳೆಯಲು ಪತ್ರಿಕೆಯೊಂದು ಯತ್ನಿಸಿದೆ. ಅದರ ಒಂದು ಭಾಗವೇ ಮೂಗು-ಕಿವಿಗೆ ಕತ್ತರಿ ಹಾಕಿರುವ ಭೀಭತ್ಸ ಪ್ರಸಂಗ.

ಅಮೆರಿಕಾದ 'ಟೈಮ್ಸ್' ನಿಯತಕಾಲಿಕ ತನ್ನ ಮುಖಪುಟದಲ್ಲೇ ಈ ಚಿತ್ರವನ್ನು ಮುದ್ರಿಸಿ ವಿಸ್ತೃತ ವರದಿ ಮಾಡಿದೆ. ಅಮೆರಿಕಾವು ಅಫಘಾನಿಸ್ತಾನವನ್ನು ಬಿಟ್ಟು ಹೋದರೆ ಅಲ್ಲಿ ಏನಾಗಬಹುದು ಎಂದು ಅದು ಚರ್ಚೆಗೆ ಆಹ್ವಾನಿಸಿದೆ. ಏನಾಗಬಹುದು ಎಂಬುದಕ್ಕೆ ಉತ್ತರವಾಗಿ ಅದು ನೀಡಿರುವ ಉದಾಹರಣೆಯೇ ಬೀಬಿ ಆಯೀಷಾ ಪ್ರಕರಣ.

ಆಕೆ ಗಂಡನ ಮನೆಯಿಂದ ಓಡಿದ್ದಳು...
ಅಫಘಾನಿಸ್ತಾನದಲ್ಲೀಗ ಅಮೆರಿಕಾ ಸೈನಿಕರ ಸಪ್ಪಳವೇ ಬಹುತೇಕ ಕೇಳಿಸುತ್ತಿದೆ ಎಂಬ ನಡುವೆಯೂ ನಡೆದಿರುವ ಘಟನೆಯಿದು. ಹತ್ತಾರು ವರ್ಷಗಳ ಹಿಂದೆ ನಡೆದಿಲ್ಲ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ತೀರಾ ಇತ್ತೀಚೆಗಷ್ಟೇ ಇದು ರಾಜಧಾನಿ ಕಾಬೂಲ್ ಸಮೀಪ ನಡೆದು ಹೋಗಿದೆ.

ಇದರ ಹಿಂದಿನ ಕಥೆ ಗೊತ್ತಿಲ್ಲ, ಆದರೆ ಬೀಬಿ ಆಯೀಷಾ ಎಂಬ 18ರ ಹರೆಯದ ಸುಂದರ ಹುಡುಗಿ ಗಂಡನ ಮನೆಯಿಂದ ಓಡಿ ಹೋಗಿದ್ದು ಹೌದು. ಅವಳೇ ಹೇಳುವ ಪ್ರಕಾರ, ಅತ್ತೆ-ಮಾವ ಕೊಂದು ಹಾಕುವ ಮೊದಲು ಜೀವ ಉಳಿಸಿಕೊಳ್ಳಲು ಪರಾರಿಯಾಗಿದ್ದಳು. ಗುಲಾಮಗಿರಿಯ ಜೀವನದಿಂದ ಆಕೆಗೂ ಮುಕ್ತಿ ಬೇಕಾಗಿತ್ತು.

ಮೈನೆರೆಯುತ್ತಿದ್ದಂತೆ ಆಯೀಷಾಳನ್ನು ತಾಲಿಬಾನ್ ಉಗ್ರನಿಗೆ ಮದುವೆ ಮಾಡಿಕೊಡಲಾಗಿತ್ತು. ಆತನೋ, ಯಾವಾಗಲೂ ಎಲ್ಲೋ ಅಡಗುದಾಣಗಳಲ್ಲಿದ್ದು ಭದ್ರತಾ ಪಡೆಗಳ ವಿರುದ್ಧ ಹೋರಾಡುತ್ತಿದ್ದವ. ಮನೆಯಲ್ಲಿ ಅತ್ತೆ-ಮಾವನ ಕಿರುಕುಳ ಹೆಚ್ಚಾಗಿತ್ತು. ಹಾಗಾಗಿ ಪರಾರಿಯ ನಿರ್ಧಾರಕ್ಕೆ ಬಂದಿದ್ದಳು.

ಪತ್ನಿ ಕಾಣೆಯಾದ ನಂತರ ಆಕೆಯ ಹುಡುಕಾಟದಲ್ಲಿ ತೊಡಗಿದ್ದ ಗಂಡನಿಗೆ ಕೊನೆಗೂ ಸಿಕ್ಕ ಆಯೀಷಾಳನ್ನು ತಾಲಿಬಾನ್ ಕಾನೂನಿನಂತೆ ಶಿಕ್ಷಿಸುವ ನಿರ್ಧಾರಕ್ಕೆ ಬರಲಾಯಿತು. ಅವರ ಪ್ರಕಾರ ಪತ್ನಿ ಓಡಿ ಹೋಗುವುದೆಂದರೆ ಗಂಡನಿಗೆ ತಾಳಲಾರದ ಅಪಮಾನ ಮತ್ತು ಅದಕ್ಕೆ ಕ್ರೂರ ಶಿಕ್ಷೆಯನ್ನೇ ನೀಡಬೇಕು.

ಅದರಂತೆ ಮೊದಲು ಉಗ್ರರು ಮನಬಂದಂತೆ ಆಯೀಷಾಳಿಗೆ ಥಳಿಸಿದ್ದಾರೆ. ಬಳಿಕ ಅವರ ನ್ಯಾಯಾಧೀಶನೊಬ್ಬ ಶಿಕ್ಷೆಯನ್ನೂ ಪ್ರಕಟಿಸಿದ್ದಾನೆ. ಅದರಂತೆ ಗಂಡನ ಸಹೋದರ (ಬಾವ) ಆಯೀಷಾಳನ್ನು ಗಟ್ಟಿಯಾಗಿ ಹಿಡಿದುಕೊಂಡ, ಗಂಡ ಕತ್ತಿಯಿಂದ ಮೊದಲು ಕಿವಿಗಳನ್ನು ಕತ್ತರಿಸಿ ಹಾಕಿದ; ಬಳಿಕ ಮೂಗನ್ನೂ ತುಂಡರಿಸಿದ.

ಪ್ರಸಕ್ತ ಆಯೇಷಾ ಅಮೆರಿಕಾ ಆಶ್ರಯದಲ್ಲಿರುವ ಮಹಿಳಾ ತಾಣವೊಂದರಲ್ಲಿ ಸುರಕ್ಷಿತವಾಗಿದ್ದಾಳೆ. ಅಮೆರಿಕಾದ ಮಿಲಿಟರಿ ಪಡೆಗಳು ಆಕೆಯನ್ನು ಉಪಚರಿಸುತ್ತಿವೆ. ವೈದ್ಯಕೀಯ ಚಿಕಿತ್ಸೆಯ ಮೂಲಕ ಆಕೆಗೆ ಹಿಂದಿನ ರೂಪವನ್ನು ಕೊಡಿಸುವ ಯತ್ನ ನಡೆಯುತ್ತಿದೆ.

ನನಗೆ ನನ್ನ ಹಿಂದಿನ ಮೂಗು ಮತ್ತು ಕಿವಿಗಳು ಬೇಕು ಎಂದು ಆಯೀಷಾ ಅಂಗಲಾಚುತ್ತಿದ್ದಾಳೆ. ಪ್ರಸಕ್ತ ಅವಳ ರೂಪ ಎಷ್ಟು ವಿಕಾರವಾಗಿದೆಯೆಂದರೆ, ಯಾರೊಬ್ಬರೂ ಮುಖಾಮುಖಿಯಾದಾಗ ನೇರವಾಗಿ ಮುಖವನ್ನು ನೋಡಲಾರರು.

ಈ ರೀತಿ ಮಾನವರೆಂಬುದನ್ನು ಮರೆತು ವರ್ತಿಸುವ ತಾಲಿಬಾನಿಗಳನ್ನು ಯಾವ ದೇವರಾದರೂ ಹೇಗೆ ಬೆಂಬಲಿಸಿಯಾನು? ಅಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ