ಪಾಕಿಸ್ತಾನದ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಾರರೊಬ್ಬರ ಕಲಾಕೃತಿಗಳನ್ನು ಕಳ್ಳತನ ಮಾಡಲು ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದಿವಂಗತ ಲೈಲಾ ಶಾಹ್ಜಾದಾ ಎಂಬ ಜನಪ್ರಿಯ ಕಲಾವಿದೆಯ ಪುತ್ರಿ ಶಾಹೀನ್ ಎಂಬಾಕೆಯೇ ಇದೀಗ ಪಾಕಿಸ್ತಾನಿ ನ್ಯಾಯಾಲಯದ ಮೊರೆ ಹೋಗಿರುವವರು. ತನ್ನ ಸಹೋದರನ ಜತೆ ಸೇರಿರುವ ಜರ್ದಾರಿಯವರು, ತನ್ನ ತಾಯಿಯ ಕರಾಚಿಯಲ್ಲಿನ ಮನೆಯಿಂದ 1994ರಲ್ಲಿ 93 ಕಲಾಕೃತಿಗಳನ್ನು ಕಳ್ಳತನ ಮಾಡಿ ಅವುಗಳನ್ನು ಲಂಡನ್‌ಗೆ ಸಾಗಿಸಿರುವುದಾಗಿ ಆರೋಪಿಸಿದ್ದಾರೆ.
ಬ್ರಿಟನ್ ಪ್ರವಾಸದ ವೇಳೆ ಜರ್ದಾರಿಯವರನ್ನು ಈ ಸಂಬಂಧ ಪ್ರಶ್ನಿಸಬೇಕು ಎಂದು ಶಾಹೀನ್ ಲಂಡನ್ ಮೆಟ್ರೋಪಾಲಿಟನ್ ಪೊಲೀಸರಲ್ಲೂ ಮನವಿ ಮಾಡಿಕೊಂಡಿದ್ದಾರೆ.
ಶಾಹೀನ್ ತಾಯಿ ಲೈಲಾ ಅವರ ಕಲಾಕೃತಿಗಳನ್ನು ನಾನು ರಕ್ಷಿಸುತ್ತಿದ್ದೇನೆ ಎಂದು ಈ ಹಿಂದೆ ಜರ್ದಾರಿಯವರು ಹೇಳಿಕೊಂಡಿದ್ದು, ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಇದೀಗ ಶಾಹೀನ್ ಮಾಡಿರುವ ಆರೋಪವನ್ನು ಅಧ್ಯಕ್ಷರ ಕಚೇರಿ ತಳ್ಳಿ ಹಾಕಿದೆ.
ಶಾಹೀನ್ ಆರೋಪಿಸುವ ಪ್ರಕಾರ ಜರ್ದಾರಿ ಮತ್ತು ತನ್ನ ಸಹೋದರ ಸೊಹೈಲ್ ಶಾಹ್ಜಾದಾ ದೀರ್ಘಕಾಲದ ಸ್ನೇಹಿತರಾಗಿದ್ದು, ಕರಾಚಿಯಲ್ಲಿನ ಮನೆಯಲ್ಲಿದ್ದ ಕಲಾಕೃತಿಗಳಲ್ಲಿ 93ನ್ನು ಫ್ಲೋರಿಡಾ ಮತ್ತು ಲಂಡನ್‌ಗಳಲ್ಲಿನ ತನ್ನ ಮನೆಗೆ ಸಾಗಿಸಿದ್ದಾರೆ.