ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ: ವಿಶ್ವಸಂಸ್ಥೆ ಘೋಷಣೆ (HuJI | terrorist group | 26/11 | US | UN | Ilyas Kashmiri | David Headley,)
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿರುವ 'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಮತ್ತು ವಿಶ್ವಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಡೇವಿಡ್ ಹೆಡ್ಲಿಯ ನಿಕಟವರ್ತಿ ಹುಜಿ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಮೇಲೆಯೂ ನಿರ್ಬಂಧ ವಿಧಿಸಿದೆ.
ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಉಗ್ರಗಾಮಿ ಸಂಘಟನೆ ಮತ್ತು ಕಮಾಂಡರ್ ಕಾಶ್ಮೀರಿ ಭಾರತದಲ್ಲಿ ನಡೆದಿರುವ ಹಲವು ಸರಣಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾನೆ. ಇದರಲ್ಲಿ 2007ರಲ್ಲಿ ಹೈದರಾಬಾದ್ ಮಸೀದಿ ದಾಳಿ, 2007ರ ಮಾರ್ಚ್‌ನಲ್ಲಿ ವಾರಣಾಸಿಯಲ್ಲಿ ನಡೆಸಿದ ಭಯೋತ್ಪಾದನಾ ದಾಳಿಯೂ ಸೇರಿದೆ.
ಅಷ್ಟೇ ಅಲ್ಲ ಕಾಶ್ಮೀರಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿಯೂ ಭಾಗಿ ಎಂದು ಆರೋಪಿಸಿರುವ ಅಮೆರಿಕ, ಆತ ಹೆಡ್ಲಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾನೆ. ಮುಂಬೈ ಭಯೋತ್ಪಾದನಾ ದಾಳಿ ಸಂಚು ರೂಪಿಸಿರುವ ಬಗ್ಗೆ ಹೆಡ್ಲಿ ಈಗಾಗಲೇ ಅಮೆರಿಕದ ಎಫ್‌ಬಿಐ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದ. ಹುಜಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಣೆಪಟ್ಟಿಕಟ್ಟಿದ ಬೆನ್ನಲ್ಲೇ, ಟ್ರೆಷರಿ ಕಾರ್ಯದರ್ಶಿ ತಿಮೋತಿ ಗೆಯ್ನರ್ ಕಾಶ್ಮೀರಿ ಮೇಲೆಯೂ ನಿರ್ಬಂಧ ವಿಧಿಸಿದರು.
ಏತನ್ಮಧ್ಯೆ, ವಿಶ್ವಸಂಸ್ಥೆ ಕೂಡ ಹುಜಿ ಮತ್ತು ಕಾಶ್ಮೀರಿ ವಿರುದ್ಧ ನಿರ್ಬಂಧ ವಿಧಿಸಿ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ನ್ಯೂಯಾರ್ಕ್ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಘೋಷಿಸಿದೆ.