'ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆ ಮಾತುಕತೆ ನಡೆಸಲು ಸಿದ್ದವಾಗಿರುವುದಾಗಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ತಿಳಿಸಿದ್ದು, ಅದಕ್ಕೂ ಮುನ್ನ ದೇಶದಲ್ಲಿನ ಅಮಾಯಕ ಜನರನ್ನು ಹತ್ಯೆಗೈಯುವುದನ್ನು ನಿಲ್ಲಿಸಬೇಕೆಂದು' ಮನವಿ ಮಾಡಿಕೊಂಡಿದ್ದಾರೆ.
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಜೊತೆಗೆ ಮಾತುಕತೆಗೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ, ತಾಲಿಬಾನ್ ಸಂಘಟನೆ ಜೊತೆ ಮಾತುಕತೆ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಉಗ್ರರ ಜೊತೆಗಿನ ಮಾತುಕತೆಯನ್ನು ನಾವು ಯಾವಾಗಲೂ ಅಂತ್ಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ ಜರ್ದಾರಿ, ಉಗ್ರರ ಜೊತೆ ಮಾಡಿಕೊಂಡ ಒಪ್ಪಂದವನ್ನು ಅವರೇ ಮುರಿದಿದ್ದಾರೆ. ಹಾಗಾಗಿ ಅವರಿಗೆ ಹಿಂಸಾಚಾರದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾದಾಗ ಯಾವಾಗ ಬೇಕಾದರೂ ಮಾತುಕತೆ ಪುನರಾರಂಭಿಸಬಹುದು ಎಂದರು.
ಆದರೆ ಶಸ್ತ್ರಾಸ್ತ್ರದೊಂದಿಗೆ ಗೆಲುವು ಸಾಧಿಸುತ್ತೇವೆ ಎಂಬ ಉಗ್ರರ ಕನಸು ಯಾವತ್ತಿಗೂ ಈಡೇರುವುದಿಲ್ಲ. ಮುಗ್ದ ಜನರ ಹತ್ಯೆ ಮಾಡುವುದನ್ನು ಕೈಬಿಟ್ಟು ತಾಲಿಬಾನ್ ಮಾತುಕತೆಗೆ ಮುಂದಾಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.
ಅಲ್ಲದೇ ದೇಶದಲ್ಲಿನ ಭಯೋತ್ಪಾದಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಉಭಯ ದೇಶಗಳ ಸಹಕಾರದ ಕುರಿತು ಮಾತುಕತೆ ನಡೆಸಲಾಯಿತು ಎಂದು ಜರ್ದಾರಿ ತಿಳಿಸಿದರು.