ಪಾಕಿಸ್ತಾನದ ಮಾಜಿ ಪ್ರಧಾನಿ ದಿ.ಬೆನಜೀರ್ ಭುಟ್ಟೋ ಮತ್ತು ಅಸಿಫ್ ಅಲಿ ಜರ್ದಾರಿ ದಂಪತಿಗಳ ಪುತ್ರ ಬಿಲಾವಲ್ ಸದ್ಯ ರಾಜಕೀಯ ಪ್ರವೇಶ ಇಲ್ಲ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಪುತ್ರಿ ಬಖ್ತಾವರ್ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಭುಟ್ಟೋ-ಜರ್ದಾರಿ ಕುಟುಂಬದ ನಿಕಟವರ್ತಿ ಶರ್ಮಿಲ್ಲಾ ಫಾರೂಕಿ ಅವರು ಈ ಕುರಿತು ಹೇಳಿಕೆ ನೀಡಿದ್ದು, ಬಖ್ತಾವರ್ ಸಕ್ರಿಯವಾಗಿ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದಾರೆ. ಬುಖ್ತಾವರ್ ರಾಜಕೀಯ ಪ್ರವೇಶ ದೇಶದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ದೇಶಾಭಿಮಾನಿಗಳಿಗೆ, ಪ್ರಜಾಪ್ರಭುತ್ವವನ್ನು ಪ್ರೀತಿಸುವವರಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ಉತ್ತಮವಾದದ್ದಾಗಿದೆ ಎಂದು ಶರ್ಮಿಲ್ಲಾ ತಿಳಿಸಿದ್ದಾರೆ. ಸಕ್ರಿಯವಾಗಿ ರಾಜಕೀಯ ಪ್ರವೇಶಿಸುವ ಮೂಲಕ ತನ್ನ ತಾಯಿ ಭುಟ್ಟೋ ಅವರ ಕನಸನ್ನು ನನಸು ಮಾಡುವ ಇಚ್ಛೆ ಹೊಂದಿರುವ ಬುಖ್ತಾವರ್ ಹಿಂದುಳಿದ ಮತ್ತು ಬಡ ಜನರ, ಮಹಿಳೆಯರ ಸೇವೆ ಮಾಡುವ ಆಶಯ ಹೊಂದಿದ್ದಾರೆ ಎಂದು ವಿವರಿಸಿದ್ದಾರೆ.
ಬುಖ್ತಾವರ್ ರಾಜಕೀಯ ಪ್ರವೇಶಿಸುವ ದಿನ ಹೆಚ್ಚು ದೂರವಿಲ್ಲ, ಆ ನಿಟ್ಟಿನಲ್ಲಿ ಮಹಿಳೆಯರು ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ದೇಶದ ಅಭಿವೃದ್ದಿ ಮಾಡುವತ್ತ ದಿಟ್ಟ ಹೆಜ್ಜೆ ಇಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.