ಭಾರತೀಯ ಅಧಿಕಾರಿಗಳಿಂದ ಅಪಹರಣ ಮತ್ತು ಜೀವ ಬೆದರಿಕೆಗಳು ಬರುತ್ತಿವೆ ಎಂದು ತನ್ನ ಮೂಲಪಕ್ಷವನ್ನು ತ್ಯಜಿಸಿ ಮಾವೋವಾದಿಗಳನ್ನು ಸೇರಿಕೊಳ್ಳುವ ಸಿದ್ಧತೆಯಲ್ಲಿರುವ ನೇಪಾಳ ಸಂಸದನೋರ್ವ ಆರೋಪಿಸಿದ್ದಾನೆ. ಆದರೆ ಈ ಆರೋಪವನ್ನು ನೇಪಾಳದ ಭಾರತೀಯ ರಾಯಭಾರ ಕಚೇರಿ ನಿರಾಧಾರ ಎಂದು ಬಣ್ಣಿಸಿ ತಳ್ಳಿ ಹಾಕಿದೆ.
'ತೆರಾಯ್ ಮಾದೇಸ್ ಲೋಕತಾಂತ್ರಿಕ ಪಕ್ಷ'ವನ್ನು ತೊರೆದಿರುವ ರಾಮ್ ಕುಮಾರ್ ಶರ್ಮಾ ಎಂಬಾತ ಇದೀಗ ಮಾವೋವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಿದ್ಧತೆಯಲ್ಲಿದ್ದು, ತಟಸ್ಥವಾಗಿರಬೇಕೆಂಬ ತಮ್ಮ ಪಕ್ಷಗಳ ಆದೇಶವನ್ನು ಧಿಕ್ಕರಿಸಿ ಪ್ರಧಾನ ಮಂತ್ರಿ ಆಯ್ಕೆಗಾಗಿನ ಚುನಾವಣೆಯಲ್ಲಿ ಮಾವೋವಾದಿ ಮುಖಂಡ ಪುಷ್ಪ ಕಮಾಲ್ ದಹಾಲ್ 'ಪ್ರಚಂಡ'ರನ್ನು ಬೆಂಬಲಿಸಲು ತೆರಾಯ್ ಪಕ್ಷಗಳಿಂದ ಸಂಸದರನ್ನು ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಇದರಿಂದಾಗಿ ತನ್ನ ಮಾಜಿ ಪಕ್ಷದಿಂದ ಕ್ರಮವನ್ನು ಎದುರು ನೋಡುತ್ತಿರುವ ಶರ್ಮಾ ನೇಪಾಳದಲ್ಲಿನ ಇತ್ತೀಚಿನ ವಿವಾದಗಳ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದ್ದಾರೆ.
ಶುಕ್ರವಾರ ನಡೆದ ನಾಲ್ಕನೇ ಸುತ್ತಿನ ಪ್ರಧಾನ ಮಂತ್ರಿ ಸ್ಥಾನಕ್ಕಾಗಿನ ಚುನಾವಣೆ ಮತ್ತೆ ವಿಫಲವಾಗಿ ಪ್ರಚಂಡ ಅಥವಾ ನೇಪಾಳಿ ಕಾಂಗ್ರೆಸ್ ನಾಯಕ ರಾಮ್ ಚಂದ್ರ ಪೌಡೆಲ್, ಇಬ್ಬರಲ್ಲಿ ಯಾರೊಬ್ಬರೂ ಆಯ್ಕೆಯಾಗಲು ವಿಫಲವಾದ ನಂತರ ಶರ್ಮಾ ಮೇಲಿನಂತೆ ಆರೋಪ ಮಾಡಿದ್ದಾರೆ.
ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದಾಸ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಸಂಸದ ಶರ್ಮಾ ಆರೋಪಿಸಿದ್ದಾರೆ.
ಶುಕ್ರವಾರ ರಾತ್ರಿ ನೇಪಾಳದ ಸುದ್ದಿವಾಹಿನಿಯೊಂದು ನಡೆಸಿದ ಗಂಟೆಗಳಷ್ಟು ಸುದೀರ್ಘ ಸಂದರ್ಶನದಲ್ಲಿ ಶರ್ಮಾ ಈ ಆರೋಪವನ್ನು ಮಾಡಿದ್ದು, ಪ್ರಮುಖ ಪತ್ರಿಕೆಗಳು ಕೂಡ ವರದಿ ಮಾಡಿವೆ.
ಆರೋಪ ಮಾಡುತ್ತಿರುವ ಸಂಸದ ಪ್ರಕಾರ ಮಾವೋವಾದಿಗಳ ಪಕ್ಷವನ್ನು ತೊರೆಯುವಂತೆ ಭಾರತೀಯ ಅಧಿಕಾರಿಗಳು ಆತನ ಮೇಲೆ ಒತ್ತಡ ಹೇರುತ್ತಿದ್ದಾರೆ.