ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್‌ನಲ್ಲಿ ಅಧ್ಯಕ್ಷ ಜರ್ದಾರಿ ಮೇಲೆ ಶೂ ಬಾಣ! (Zardari | Britain | Shoes hurled | Pakistan | Telegraph)
Bookmark and Share Feedback Print
 
ಚೀನಾ ಪ್ರಧಾನಿ ವೆನ್ ಜಿಬಾವೋ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಶೂ ಎಸೆದ ಪ್ರಕರಣದ ನಂತರ ಇದೀಗ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಎರಡು ಶೂಗಳನ್ನು ಎಸೆದ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದು, ಶೂಗಳು ಜರ್ದಾರಿ ಅವರ ಮೇಲೆ ಬೀಳದೆ ಸಮೀಪದಲ್ಲೇ ಬಿದ್ದಿರುವುದಾಗಿ ವರದಿಯೊಂದು ತಿಳಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸಭೆಯನ್ನು ಉದ್ದೇಶಿಸಿ ಜರ್ದಾರಿ ಮಾತನಾಡುತ್ತಿದ್ದ ವೇಳೆಯಲ್ಲಿ, ಪಾಕಿಸ್ತಾನದಲ್ಲಿ ಪ್ರವಾಹ ಉಕ್ಕಿ ಹರಿದು ಜನರು ತತ್ತರಿಸಿಹೋಗಿರುವ ಸಂದರ್ಭದಲ್ಲಿ ಬ್ರಿಟನ್‌ಗೆ ಬರುವ ಅಗತ್ಯ ಏನಿತ್ತು ಎಂದು ಆಕ್ರೋಶಗೊಂಡ ಪಾಕಿಸ್ತಾನಿ ಮೂಲದ ಬ್ರಿಟನ್ ವಾಸಿಯೊಬ್ಬ ನೆರೆದ ಜನಸಮೂಹದ ಮಧ್ಯದಿಂದಲೇ ಶೂಗಳನ್ನು ಜರ್ದಾರಿಯತ್ತ ತೂರಿದ್ದ ಎಂದು ದಿ ಟೆಲಿಗ್ರಾಫ್ ಭಾನುವಾರದ ವರದಿಯಲ್ಲಿ ವಿವರಿಸಿದೆ.

ಅಧ್ಯಕ್ಷ ಜರ್ದಾರಿಯತ್ತ ಶೂ ಬಾಣ ಎಸೆದ ಅಪರಚಿತ ವ್ಯಕ್ತಿಯನ್ನು ಶನಿವಾರ ಸಂಜೆ ನಡೆದ ಸಭೆಯ ನಂತರ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.

ಜರ್ದಾರಿಯರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆಯಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಜರ್ದಾರಿಯತ್ತ ಶೂಗಳನ್ನು ಎಸೆದಿದ್ದ. ಆದರೆ ಅದು ಅಧ್ಯಕ್ಷರಿಗೆ ತಗುಲಿಲ್ಲವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿರುವುದಾಗಿ ವರದಿ ಹೇಳಿದೆ.

ಪಾಕಿಸ್ತಾನಿಯರು ಪ್ರವಾಹದಲ್ಲಿ ಸಿಕ್ಕು ಒದ್ದಾಡುತ್ತಿದ್ದರೆ, ಜರ್ದಾರಿ ಬ್ರಿಟನ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರ ಆಕ್ರೋಶವ್ಯಕ್ತಪಡಿಸಿದ್ದ.

ಆಕ್ರೋಶಿತ ವ್ಯಕ್ತಿಗಳು ಜನಪ್ರತಿನಿಧಿಗಳ ಮೇಲೆ ಶೂ, ಚಪ್ಪಲಿ ಎಸೆಯುವುದು ಹೊಸದೇನಲ್ಲ, ಇದಕ್ಕೂ ಮುನ್ನ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಮೇಲೂ ಪ್ರತಿಭಟನಾಕಾರನೊಬ್ಬ ಶೂ ಎಸೆದಿದ್ದ. ನಂತರ ಚೀನಾ ಪ್ರಧಾನಿ ವೆನ್ ಜಿಬಾವೊ ಅವರು ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ, ಈತ ಸರ್ವಾಧಿಕಾರಿ, ವೆನ್ ಅವರ ಸುಳ್ಳು ಭಾಷಣ ಕೇಳಬೇಡಿ ಎಂದು ಕೂಗಾಡಿ ಶೂ ಎಸೆದಿದ್ದ.

ಭಾರತದಲ್ಲಿಯೂ ಕೂಡ ಗೃಹ ಸಚಿವ ಪಿ.ಚಿದಂಬರಂ ಅವರ ಮೇಲೆ ಪತ್ರಕರ್ತ ಜರ್ನೈಲ್ ಸಿಂಗ್ ಶೂ ಎಸೆದ ಪ್ರಕರಣವೂ ನಡೆದಿತ್ತು. ತದನಂತರ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ವಿದ್ಯಾರ್ಥಿಯೊಬ್ಬ ಶೂ ಎಸೆದಿದ್ದ, ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರ ಮೇಲೆಯೂ ವ್ಯಕ್ತಿಯೊಬ್ಬ ಚಪ್ಪಲಿ ಎಸೆದ ಘಟನೆಯನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ