ಮದುವೆ ಸಮಾರಂಭದಲ್ಲಿಯೇ ವರಮಹಾಶಯ ಏಕಾಏಕಿ ಎಕೆ 47 ಗನ್‌ನಿಂದ ಗುಂಡು ಹಾರಿಸಿದ ಪರಿಣಾಮ ಆಕಸ್ಮಿಕವಾಗಿ ವರನ ತಂದೆ ಹಾಗೂ ಸಂಬಂಧಿಗಳು ಸೇರಿದಂತೆ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.
ಮದುಮಗ ಟೆವ್‌ಫಿಕ್ ಅಲ್ಟುನ್ ನಡೆಸಿದ ಗುಂಡಿನ ದಾಳಿಗೆ ಆತನ ತಂದೆ ಅರಿಫ್ ಅಲ್ಟುನ್ ಮತ್ತು ಆತನ ಇಬ್ಬರು ಚಿಕ್ಕಮ್ಮಂದಿರಾದ ಯಾಸೆಮಿನ್ ಕೋಸೆಯೊಗ್ಲು, ಮುನಿರೆ ಕೋಸೆಯೊಗ್ಲು ಬಲಿಯಾಗಿರುವುದಾಗಿ ಕ್ಸಿನ್‌ಹುವಾ ವರದಿ ತಿಳಿಸಿದೆ.
ಇಲ್ಲಿನ ಗಾಜಿಯನ್‌ಟೆಪ್ ಪ್ರಾಂತ್ಯದ ಅಕಾಗೋಜೆ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭಕ್ಕೆ ವರ ಟೆವ್‌ಫಿಕ್ ಆಗಮಿಸಿದಾಗ, ಆತನ ಸಂಬಂಧಿಗಳು ಆತನಲ್ಲಿ ಎಕೆ 47 ಗನ್ ಕೊಟ್ಟಿದ್ದರು. ತದನಂತರ ವರ ಮಹಾಶಯ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸತೊಡಗಿದ್ದ, ಆದರೆ ಗನ್ ಹತೋಟಿಗೆ ತರಲು ಸಾಧ್ಯವಾಗದ ಪರಿಣಾಮ ಆಕಸ್ಮಿಕವಾಗಿ ಜನರ ಗುಂಪಿನತ್ತ ಗುಂಡಿನ ಸುರಿಮಳೆಯಾಗತೊಡಗಿತ್ತು. ದುರಾದೃಷ್ಟ ಆತನ ಎಡವಟ್ಟಿಗೆ ತಂದೆ ಮತ್ತು ಸಂಬಂಧಿಗಳೇ ಆಹುತಿಯಾಗಿದ್ದಾರೆ. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ನಾಲ್ಕು ಮಂದಿಯ ಸ್ಥಿತಿ ಗಂಭೀರವಾಗಿದೆ. ಮದುಮಗ ಟೆವ್‌ಫಿಕ್ ಅಲ್ಟುನ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.