ಬರ್ಮಿಂಗ್‌ಹ್ಯಾಮ್‌ನಲ್ಲಿ ಪಿಪಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ಸುದ್ದಿಯನ್ನು ಪ್ರಸಾರ ಮಾಡಿದ ಕರಾಚಿ ಮೂಲದ ಜಿಯೋ ನ್ಯೂಸ್ ಚಾನೆಲ್ ಪ್ರಸಾರಕ್ಕೆ ದೇಶದ ವಿವಿಧೆಡೆ ತಡೆಯೊಡ್ಡಿರುವ ಘಟನೆ ನಡೆದಿದೆ.
ಜರ್ದಾರಿಯವರ ಮೇಲೆ ಶೂ ಎಸೆದ ಘಟನೆಯನ್ನು ಜಿಯೋ ನ್ಯೂಸ್ ನಿರಂತರವಾಗಿ ಪ್ರಸಾರ ಮಾಡುತ್ತಿರುವ ಬಗ್ಗೆ ಪಾಕಿಸ್ತಾನ ಪೀಪಲ್ಸ್ ಪಕ್ಷದ ಕೆಲವು ಮುಖಂಡರು ಮತ್ತು ಸರಕಾರಿ ಅಧಿಕಾರಿಗಳು ಬೆದರಿಕೆ ಹಾಕಿ,ಕೇಬಲ್ ಆಪರೇಟರ್‌ಗಳಿಗೂ ಜಿಯೋ ಚಾನೆಲ್ ಪ್ರಸಾರ ತಡೆಯೊಡ್ಡುವಂತೆ ಎಚ್ಚರಿಕೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ಆದರೆ ಬಹುತೇಕ ಕೇಬಲ್ ಆಪರೇಟರ್ಸ್ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆದರೆ ವರ್ಲ್ಡ್ ಕಾಲ್ ಮತ್ತು ಕೆಎಂಪಿಸಿ ಎಂಬ ಎರಡು ಖಾಸಗಿ ಕಂಪನಿಗಳು ಜಿಯೋ ನ್ಯೂಸ್ ಸಿಗ್ನಲ್ಸ್ ಅನ್ನು ಬ್ಲಾಕ್ ಮಾಡಿವೆ.
ಏತನ್ಮಧ್ಯೆ,ಸುದ್ದಿ ಪ್ರಸಾರ ಮಾಡಿರುವ ಬಗ್ಗೆ ಚಾನೆಲ್ ಪ್ರಸಾರಕ್ಕೆ ತಡೆಯೊಡ್ಡಿರುವ ಸರಕಾರದ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಜಿಯೋ ನ್ಯೂಸ್ ಉದ್ಯೋಗಿಗಳು ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಅಧ್ಯಕ್ಷರ ನಿವಾಸ, ಪ್ರಧಾನಿ ನಿವಾಸ, ಇಸ್ಲಾಮಾಬಾದ್‌ನ ಓಮಾನ್ ಎಂಬೆಸಿ, ಮುಖ್ಯಮಂತ್ರಿಗಳ ನಿವಾಸ, ರಾಜ್ಯಪಾಲರ ನಿವಾಸ ಹಾಗೂ ದೇಶಾದ್ಯಂತ ಇರುವ ಪ್ರೆಸ್ ಕ್ಲಬ್ ಮುಂಭಾಗಗಳಲ್ಲಿ ಪ್ರತಿಭಟನೆ ನಡೆಸಲು ಜಿಯೋ ಉದ್ದೇಶಿಸಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಪಿಪಿಪಿಯ ಸಭೆಯನ್ನು ಉದ್ದೇಶಿಸಿ ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮಾತನಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಎರಡು ಶೂಗಳನ್ನು ಅಧ್ಯಕ್ಷರತ್ತ ಎಸೆದಿದ್ದ. ಆದರೆ ಶೂಗಳು ಅವರಿಗೆ ತಗುಲದೆ ಹತ್ತಿರದಲ್ಲೇ ಬಿದ್ದಿದ್ದವು, ಈ ಸುದ್ದಿಯನ್ನು ಜಿಯೋ ಚಾನೆಲ್ ಪ್ರಸಾರ ಮಾಡಿರುವುದೇ ಪಿಪಿಪಿ ಹಾಗೂ ಸರಕಾರಕ್ಕೆ ಇರಿಸುಮುರಿಸು ಉಂಟು ಮಾಡಿತ್ತು.