ಎಕ್ಸಿಮ್ ಬ್ಯಾಂಕ್ ಜತೆಗಿನ ಒಂದು ಬಿಲಿಯನ್ ಡಾಲರ್ ಸಾಲಕ್ಕೆ ಭಾರತ ಸರಕಾರದ ಜತೆ ಕಳೆದ ಶನಿವಾರ ಬಾಂಗ್ಲಾದೇಶ ಸಹಿ ಹಾಕಿದ ಬೆನ್ನಿಗೆ ಇದು ಆತ್ಮಹತ್ಯೆಗೆ ಸಮಾನ ಎಂದು ಪ್ರತಿಪಕ್ಷದ ನಾಯಕಿ ಖಾಲಿದ್ ಜಿಯಾ ಬಣ್ಣಿಸಿದ್ದಾರೆ.
ಆದರೆ ಜಿಯಾ ಆರೋಪವನ್ನು ಶೇಖ್ ಹಸೀನಾ ಸರಕಾರವು ತಳ್ಳಿ ಹಾಕಿದೆ.
ಭಾರತದಿಂದ ಸಾಲ ಪಡೆಯಬೇಕಾದ ಅಗತ್ಯ ಈಗ ಇರಲಿಲ್ಲ. ಆ ಹೊರೆಯನ್ನೀಗ ಜನತೆ ಹೊರಬೇಕಾಗಿದೆ ಎಂದು ಜಿಯಾ ಹೇಳಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ಭಾರತದ ಜತೆಗಿನ ಈ ಸಾಲದ ಒಪ್ಪಂದವು ಆತ್ಮಹತ್ಯಾಕಾರಿಯಾಗಿದೆ ಎಂದು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಅಧ್ಯಕ್ಷೆಯಾಗಿರುವ ಜಿಯಾ ಹೇಳಿಕೊಂಡಿದ್ದಾರೆ.
ಅದೇ ಹೊತ್ತಿಗೆ ಭಾರತದ ಜತೆಗಿನ ಸಾಲದ ಬಡ್ಡಿ, ಅಂತಾರಾಷ್ಟ್ರೀಯ ದರಕ್ಕಿಂತ ಏಳು ಪಟ್ಟು ಹೆಚ್ಚಾಗಿದೆ. ಇದನ್ನು ಬಾಂಗ್ಲಾ ಪಾವತಿಸಬೇಕಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
20 ವರ್ಷಗಳ ಮರುಪಾವತಿ ಅವಧಿ ಹೊಂದಿರುವ ಈ ಸಾಲಕ್ಕೆ ಶೇ.1.75 ಬಡ್ಡಿ ದರ ವಿಧಿಸಲಾಗುತ್ತಿದ್ದು, ಐದು ವರ್ಷಗಳ ಮರುಪಾವತಿ ವಿಸ್ತರಣೆ ಅವಕಾಶವಿದೆ.