ಆಸ್ಟ್ರೇಲಿಯಾ: ಗಡೀಪಾರು ಭೀತಿಯಲ್ಲಿ ಭಾರತೀಯ ವಿದ್ಯಾರ್ಥಿಗಳು
ಮೆಲ್ಬೋರ್ನ್, ಸೋಮವಾರ, 9 ಆಗಸ್ಟ್ 2010( 18:46 IST )
ಇಂಗ್ಲೀಷ್ ಭಾಷಾ ಜ್ಞಾನದ ಕೊರತೆಯಿಂದಾಗಿ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಾರು ವಿದೇಶಿ ನರ್ಸಿಂಗ್ ವಿದ್ಯಾರ್ಥಿಗಳು, ಅದರಲ್ಲೂ ಬಹುತೇಕ ಭಾರತೀಯರು ಗಡೀಪಾರು ಭೀತಿಯಲ್ಲಿದ್ದಾರೆ ಎಂದು ವರದಿಗಳು ಹೇಳಿವೆ.
ತಮ್ಮ ಕೋರ್ಸುಗಳನ್ನು ಪೂರ್ತಿಗೊಳಿಸಿ, ಆಕರ್ಷಕ ಉದ್ಯೋಗದ ಆಹ್ವಾನಗಳನ್ನು ಸ್ವೀಕರಿಸಿದ ನಂತರ ಇದೀಗ ತಾಯ್ನೆಲಕ್ಕೆ ವಾಪಸ್ ಹೋಗಬೇಕಾದ ಬೆದರಿಕೆಯನ್ನು ನರ್ಸಿಂಗ್ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಪ್ರಸಕ್ತ ಭಾರತ, ಚೀನಾ, ಥಾಯ್ಲೆಂಡ್ ಮತ್ತು ಫಿಲಿಪೈನ್ಸ್ ದೇಶಗಳ ಸುಮಾರು 400 ವಿದ್ಯಾರ್ಥಿಗಳು ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ನಡುವೆಯೇ ಸಂಬಂಧಪಟ್ಟವರು ಉದ್ಯೋಗಗಳಿಗಾಗಿನ ಅರ್ಹತೆಯನ್ನು ಬದಲಾಯಿಸಿದ್ದಾರೆ. ಆಂಗ್ಲ ಭಾಷೆಯ ಕನಿಷ್ಟ ಗುಣಮಟ್ಟದ ಕುರಿತು ಹೊಸ ನೀತಿಗಳನ್ನು ರೂಪಿಸಿದ್ದಾರೆ. ಹಾಗಾಗಿ ಹಲವು ವಿದ್ಯಾರ್ಥಿಗಳು ಗಡೀಪಾರು ಭೀತಿಯಲ್ಲಿದ್ದಾರೆ.
ಅದರ ಪ್ರಕಾರ ವಿದ್ಯಾರ್ಥಿಗಳು ಅಗತ್ಯ ಇಂಗ್ಲೀಷ್ ಜ್ಞಾನವನ್ನು ಹೊಂದಿರಬೇಕಾದ ಅಗತ್ಯವಿದೆ. ಇದಕ್ಕಾಗಿ ಆಸ್ಟ್ರೇಲಿಯಾವು ಇಂಗ್ಲೆಂಡ್ ಅನುಸರಿಸುತ್ತಿರುವ ನೀತಿಯನ್ನೇ ಪಾಲಿಸಲು ನಿರ್ಧರಿಸಿದೆ.
ಪೌರತ್ವ ಪಡೆಯಲು ಅಥವಾ ಕೆಲಸ ಮಾಡಲು ಇಂಗ್ಲೀಷ್ ಬರೆಯುವುದು ಮತ್ತು ಸುಲಲಿತವಾಗಿ ಮಾತನಾಡುವುದು ಕಡ್ಡಾಯ ಎಂಬ ನೀತಿಯನ್ನು ಆಸ್ಟ್ರೇಲಿಯಾ ಜಾರಿಗೆ ತರಲು ನಿರ್ಧರಿಸಿರುವುದರಿಂದ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.