ಅಮೆರಿಕಾ ಮೈತ್ರಿಪಡೆಗಳು ಭಯೋತ್ಪಾದಕರ ನಡೆಗಳನ್ನು ಎಷ್ಟೇ ನಿಯಂತ್ರಿಸಲು ಯತ್ನಿಸಿದರೂ ಕುಕೃತ್ಯಗಳು ಎಗ್ಗಿಲ್ಲದೆ ಸಾಗುತ್ತಿವೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ವ್ಯಭಿಚಾರದ ಆರೋಪ ಹೊರಿಸಿದ ತಾಲಿಬಾನಿಗಳು ಗರ್ಭಿಣಿ ವಿಧವೆ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಥಳಿಸಿದ ನಂತರ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಕೊಂದು ಹಾಕಿರುವ ಪ್ರಸಂಗ ವರದಿಯಾಗಿದೆ.
ಅಫಘಾನಿಸ್ತಾನದ ಬಾಗ್ದಾಹೀಸ್‌ನಲ್ಲಿನ ಗ್ರಾಮಾಂತರ ಪಶ್ಚಿಮ ಪ್ರಾಂತ್ಯದಲ್ಲಿನ ಖಾದಿಸ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 35ರ ಹರೆಯದ ಬೀಬಿ ಸಾನುಬಾರ್ ಎಂಬಾಕೆಯನ್ನು ಭಾನುವಾರ ತಾಲಿಬಾನ್ ಕಮಾಂಡರ್ ಓರ್ವ ಕೊಂದು ಹಾಕಿದ್ದಾನೆ. ಸಾನುಬಾರ್‌ಳನ್ನು ಮೂರು ದಿನಗಳ ಕಾಲ ಒತ್ತೆಯಾಳನ್ನಾಗಿ ಇಟ್ಟುಕೊಂಡು ನಂತರ ಸಾರ್ವಜನಿಕವಾಗಿ ಹತ್ಯೆಗೈಯಲಾಗಿದೆ.
ತಾಲಿಬಾನ್ ಪ್ರಕಾರ ಸಾನುಬಾರ್ ಅಕ್ರಮ ಸಂಬಂಧ ಹೊಂದಿದ್ದಳು ಮತ್ತು ಅದೇ ಕಾರಣದಿಂದ ಗರ್ಭಿಣಿಯಾಗಿದ್ದಳು. ಆಕೆಗೆ ಮೊದಲು ಸಾರ್ವಜನಿಕವಾಗಿ 200 ಛಡಿಯೇಟುಗಳನ್ನು ನೀಡಲಾಯಿತು. ಬಳಿಕ ತಲೆಗೆ ಮೂರು ಗುಂಡುಗಳನ್ನು ಹಾರಿಸಲಾಯಿತು ಎಂದು ಪ್ರಾಂತ್ಯದ ಉಪ ಪೊಲೀಸ್ ಅಧಿಕಾರಿ ಗುಲಾಂ ಮೊಹಮ್ಮದ್ ಸಯ್ಯದಿ ತಿಳಿಸಿದ್ದಾರೆ.
ಗರ್ಣಿಣಿ ಮಹಿಳೆಯನ್ನು ಸಾರ್ವಜನಿಕವಾಗಿ ತಲೆಗೆ ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
1996ರಿಂದ 2001ರ ವರೆಗೆ ಅಫಘಾನಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದಿದ್ದ ತಾಲಿಬಾನ್ ತನ್ನ ಕ್ರೂರತೆಗೆ ಹೆಸರಾಗಿತ್ತು. ಈ ಘಟನೆ ಮತ್ತೆ ಅದನ್ನು ನೆನಪಿಸಿದೆ. ತಮ್ಮ ಸರಕಾರ ಅಸ್ತಿತ್ವದಲ್ಲಿ ಇದ್ದ ಸಂದರ್ಭದಲ್ಲಿ ವ್ಯಭಿಚಾರ ಮತ್ತು ವಿವಾಹೇತರ ಸಂಬಂಧಗಳಿಗೆ ತಾಲಿಬಾನಿಗಳು ಸಾರ್ವಜನಿಕವಾಗಿ ಕಲ್ಲು ಹೊಡೆಸಿ ಅಥವಾ ಛಡಿಯೇಟು ನೀಡಿ ಕೊಲ್ಲುವ ಅಮಾನವೀಯ ಶಿಕ್ಷೆಗಳನ್ನು ನೀಡುತ್ತಿದ್ದರು.