ದೇಶದ ನೌಕರಿಗಳು ಮತ್ತು ಕೈಗಾರಿಕೆಗಳು ಚೀನಾ, ಭಾರತ ಅಥವಾ ಜರ್ಮನಿಯತ್ತ ಸಾಗುವ ಅಪಾಯಗಳು ದೂರವಾಗಿದ್ದು, ಅಮೆರಿಕಾವು ಸದೃಢ ಸ್ಪರ್ಧಾತ್ಮಕತೆಗೆ ಮರಳಿದೆ ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.
ನಾನು ಅಧಿಕಾರಕ್ಕೆ ಬಂದ ನಂತರ ದುರಾಸೆಗೆ ಬದಲಾಗಿ ಕಠಿಣ ಪರಿಶ್ರಮದ ಅಗತ್ಯವಿರುವ ನೂತನ ಆರ್ಥಿಕ ಯೋಜನೆಯೊಂದನ್ನು ನಾವು ಜಾರಿಗೆ ತಂದೆವು. ನಿರ್ಲಕ್ಷ್ಯದ ಬದಲಿಗೆ ಜವಾಬ್ದಾರಿಯುತ ಯೋಜನೆ ನಮ್ಮದಾಗಿತ್ತು. ನಮ್ಮ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿದ ಯೋಜನೆಯು ಅವರನ್ನು ಸುರಕ್ಷಿತವನ್ನಾಗಿಡುವ ಗುರಿಯನ್ನು ಹೊಂದಿತ್ತು ಎಂದು ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಮಾತನಾಡುತ್ತಿದ್ದ ಒಬಾಮಾ ಹೇಳಿದರು.
ಮಾತು ಮುಂದುವರಿಸಿದ ಅಮೆರಿಕಾ ಅಧ್ಯಕ್ಷರು, ಸಾಕಷ್ಟು ಸಮಯಗಳ ನಂತರ ಅಮೆರಿಕಾವು ಸ್ಪರ್ಧಾತ್ಮಕ ನಡೆಯಲ್ಲಿದೆ. ಹಾಗಾಗಿ ಉದ್ಯೋಗಗಳು ಮತ್ತು ಕೈಗಾರಿಕೆಗಳು ಚೀನಾ, ಭಾರತ ಅಥವಾ ಜರ್ಮನಿಗಳಿಗೆ ಮುಂದಿನ ದಿನಗಳಲ್ಲಿ ಹೋಗಲಾರವು. ಬದಲಿಗೆ ಅವೆಲ್ಲ ಸರಿಯಾದ ಜಾಗವೆನಿಸಿದ ಅಮೆರಿಕಾಕ್ಕೆ ಹೋಗುತ್ತವೆ ಎಂದರು.
ಆರ್ಥಿಕ ಹಿಂಜರಿತದ ಜತೆಗೆ ಹೊರಗುತ್ತಿಗೆ ಒಪ್ಪಂದಗಳು ಭಾರತ ಮತ್ತಿತರ ದೇಶಗಳ ಪಾಲಾಗುತ್ತಿರುವುದರಿಂದ ಅಮೆರಿಕಾ ತೀವ್ರ ಆತಂಕಕ್ಕೀಡಾಗಿತ್ತು. ಭಾರೀ ನಷ್ಟವನ್ನು ಅನುಭವಿಸಿದ್ದ ಒಬಾಮಾ ಆಡಳಿತ ನೂತನ ತಂತ್ರಗಳನ್ನು ಪಾಲಿಸುವ ಮೂಲಕ ಇದರ ಮೇಲೆ ನಿಯಂತ್ರಣ ಹೇರುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡಿತ್ತು.