ನ್ಯಾಯಾಲಯಕ್ಕೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಕೂಡ ಕೋರ್ಟ್‌ಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಪಾಕಿಸ್ತಾನ್ ಕೋರ್ಟ್ ಮಂಗಳವಾರ ಘೋಷಿತ ಅಪರಾಧಿ ಎಂದು ಆದೇಶ ನೀಡಿದೆ.
ಮುಷರ್ರಫ್ ವಿರುದ್ಧ ಮೌಲ್ವಿ ಇಕ್ಬಾಲ್ ಹೈದರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಂಧ್ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಸರ್ಮದ್ ಜಲಾಲ್ ಉಸ್ಮಾನಿ ಈ ಆದೇಶವನ್ನು ಜಾರಿಗೊಳಿಸಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷರಾಗಿದ್ದ ವೇಳೆ ಮುಷ್ ಸಂವಿಧಾನ ಉಲ್ಲಂಘಿಸಿದ್ದು, ದೇಶದ್ರೋಹ ಎಸಗುವ ಮೂಲಕ ದೇಶದ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಹೈದರ್ ಅರ್ಜಿಯಲ್ಲಿ ದೂರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಹಲವು ಬಾರಿ ಮುಷರ್ರಫ್ ಅವರು ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರೂ ಕೂಡ ಅವರು ಗೈರು ಹಾಜರಾಗಿದ್ದರು.
ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಮುಷರ್ರಫ್ ಘೋಷಿತ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ಲದೆ, ನಿಗದಿತ ಸಮಯದೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಬ್ರಿಟನ್ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಆದೇಶ ನೀಡಿದೆ.
ಪಾಕಿಸ್ತಾನದ ವಿವಿಧ ಕೋರ್ಟ್‌ಗಳಲ್ಲಿ ಮುಷರ್ರಫ್ ವಿರುದ್ಧ ಹಲವಾರು ಕೇಸುಗಳ ವಿಚಾರಣೆ ಬಾಕಿ ಇದೆ. ಅಷ್ಟೇ ಅಲ್ಲ 2007ರ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಗೂ ಕೂಡ ಮುಷರ್ರಫ್ ಹೊಣೆಗಾರರು ಎಂದು ವಿಶ್ವಸಂಸ್ಥೆ ನೇತೃತ್ವದ ವಿಚಾರಣಾ ಆಯೋಗ ವರದಿ ಸಲ್ಲಿಸಿದೆ ಎಂದು ಹೈದರ್ ತಿಳಿಸಿದ್ದಾರೆ.
ಮುಷರ್ರಫ್ ಅವರು ಬಹಳಷ್ಟು ಒತ್ತಡಗಳ ನಂತರ ಪಾಕಿಸ್ತಾನ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡಿದ್ದರು. ಸುಮಾರು ಎಂಟು ತಿಂಗಳ ನಂತರ 2009ರ ಏಪ್ರಿಲ್ ತಿಂಗಳಿನಲ್ಲಿ ಮುಷರ್ರಫ್ ಅವರು ಸ್ವಯಂಘೋಷಿತರಾಗಿ ಪಾಕಿಸ್ತಾನ ಬಿಟ್ಟು ವಿದೇಶಕ್ಕೆ ಗಡಿಪಾರುಗೊಂಡಿದ್ದರು.