ಅಮೆರಿಕಾ ಒಂದು ವೇಳೆ ದಾಳಿ ನಡೆಸಿದರೆ ಅವರ ಪಡೆಗಳನ್ನು ಹೂತು ಹಾಕಲು ನಾವು ಗೋರಿ ತೋಡುತ್ತಿದ್ದೇವೆ ಎಂದಿರುವ ಇರಾನ್, ಮಿಲಿಟರಿ ದಾಳಿಯೇನಾದರೂ ನಡೆದಲ್ಲಿ ಈ ಪ್ರಾಂತ್ಯದಲ್ಲಿ ವ್ಯಾಪಕ ಯುದ್ಧ ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
1980-88ರ ಇರಾಕ್ ನಾಯಕ ಸದ್ದಾಂ ಹುಸೇನ್ ಕಾಲದಲ್ಲಿ ಇಸ್ಲಾಮಿಕ್ ಗಣರಾಜ್ಯ ಮತ್ತು ಇರಾನ್ ನಡುವಿನ ಯುದ್ಧದ ಸಂದರ್ಭದಲ್ಲಿ ಇರಾಕ್ ಯೋಧರನ್ನು ಇರಾನ್ ತನ್ನ ನೇರುತ್ಯ ಪ್ರಾಂತ್ಯ ಖುಜೆಸ್ತಾನ್‌ನಲ್ಲಿ ಹೊತಿತ್ತು. ಅದೇ ಪ್ರಾಂತ್ಯದಲ್ಲಿ ಅಮೆರಿಕಾ ಯೋಧರನ್ನು ಹೂಳಲು ತಾನು ಸಮಾಧಿಗಳನ್ನು ತೋಡುತ್ತಿರುವುದಾಗಿ ಇರಾನ್‌ನ ರೆವೊಲ್ಯೂಷನರಿ ಗಾರ್ಡ್ ಕಮಾಂಡರ್ ಜನರಲ್ ಹೊಸೈನ್ ಕನಾನಿ ಮೊಗ್ದಾಡಮ್ ಎಚ್ಚರಿಕೆ ನೀಡಿದ್ದಾರೆ.
ಸದ್ದಾಮ್‌ರ ಸೈನಿಕರನ್ನು ಹೂಳಲು ಬಳಸಿದ ಭಾರೀ ಸಮಾಧಿಗಳನ್ನು ಇದೀಗ ಅಮೆರಿಕಾ ಸೈನಿಕರನ್ನು ಹೂತು ಹಾಕಲು ಸಿದ್ಧಗೊಳಿಸಲಾಗುತ್ತಿದೆ. ಅದೇ ಕಾರಣದಿಂದ ನಾವೀಗ ಭಾರೀ ಸಂಖ್ಯೆಯ ಸಮಾಧಿಗಳನ್ನು ಅಗೆಯುತ್ತಿದ್ದೇವೆ ಎಂದು ಜನರಲ್ ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.
ಅದೇ ಹೊತ್ತಿಗೆ ಅಮೆರಿಕಾ ಕುರಿತು ಅವರು ಲೇವಡಿ ಮಾಡಿದ್ದು, ಅಮೆರಿಕಾ ಪಡೆಗಳು ಇರಾನ್ ಮಣ್ಣಿನಲ್ಲಿ ಹೆಜ್ಜೆಯಿಡುವುದು ಕೂಡ ಬಹುತೇಕ ಅಸಾಧ್ಯ ಎಂದಿದ್ದಾರೆ.
ಇರಾನ್ ಮೇಲೆ ದಾಳಿಯೇನಾದರೂ ನಡೆಸಿದಲ್ಲಿ ಗಲ್ಫ್‌ನಲ್ಲಿ ಅಮೆರಿಕಾ ಹೊಂದಿರುವ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾ ನೌಕಾ ಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿಯು ಇರಾನ್ ಸಮೀಪದಲ್ಲೇ ಇದೆ.