ವಿಶ್ವಸಂಸ್ಥೆಯ ಮಕ್ಕಳ ಕಲ್ಯಾಣ ನಿಧಿ ಯೂನಿಸೆಫ್‌ನ ರಾಯಭಾರಿಯಾಗಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಮಂಗಳವಾರ ನೇಮಕಗೊಂಡಿದ್ದಾರೆ.
ನಾನು ಅತ್ಯಂತ ಹರ್ಷಗೊಂಡಿದ್ದೇನೆ. ಮಕ್ಕಳ ಸಮಸ್ಯೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲಿದ್ದೇನೆ ಎಂದು ಬಾಲಿವುಡ್ ನಟಿ ಹೇಳಿದರು.
ಯೂನಿಸೆಫ್‌ನಲ್ಲಿ ಕೆಲಸ ಮಾಡುವ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೇಶ ಹಾಗೂ ವಿದೇಶದದಲ್ಲಿ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಮತ್ತು ಶರ್ಮಿಳಾ ಟಾಗೋರ್ ಅವರ ಹಾದಿಯನ್ನು ಅನುಸರಿಸಲಿದ್ದೇನೆ ಎಂದವರು ಹೇಳಿದರು.
ನಾನು ಸರಕಾರದ ಪ್ರತಿನಿಧಿ ಅಥವಾ ದೇಶದ ರಾಷ್ಟ್ರಪತಿ ಅಲ್ಲ. ಆದರೆ ಹಿಂದಿ ಚಿತ್ರ ಜಗತ್ತಿನಲ್ಲಿರುವ ನಾನು ಜಾತಿ, ಭೇದಭಾವವಿಲ್ಲದೆ ಮಕ್ಕಳ ಸಮಸ್ಯೆಯ ಬಗ್ಗೆ ಮಾತನಾಡಲಿದ್ದೇನೆ. ಜೀವನ, ಆಹಾರ, ಶಾಲೆಗಳಂತಹ ಅಗತ್ಯವಾದ ಮಕ್ಕಳ ಆಕಾಂಕ್ಷೆಯನ್ನು ಈಡೇರಿಸಬೇಕಾಗಿದೆ. ನಾನು ಕೇವಲ ಭರವಸೆ ನೀಡಲು ಇಚ್ಛಿಸುವುದಿಲ್ಲ. ಸಮಾಜಕ್ಕಾಗಿ ಏನಾದರೂ ಸೇವೆ ಮಾಡಬೇಕಾಗಿದೆ ಎಂದವರು ಹೇಳಿದರು.
ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವೆ. ಅಲ್ಲದೆ ಕೊಳೆಗೇರಿ ಮಕ್ಕಳ ಸಮಸ್ಯೆಯ ಅರಿವೂ ಚೆನ್ನಾಗಿದೆ. ಮಕ್ಕಳಿಗೆ ವಿಧ್ಯಾಭ್ಯಾಸ ಖಾತ್ರಿಪಡಿಸುವುದು ತಂದೆ ತಾಯಂದಿರ ಕರ್ತವ್ಯವಾಗಿದೆ ಎಂದವರು ಹೇಳಿದರು.
ಯೂನಿಸೆಫ್‌ನ ಭಾರತದ ಪ್ರತಿನಿಧಿ ಕರೀನ್ ಹಲ್ಸಾಫ್ ಮಾತನಾಡುತ್ತಾ, ಪ್ರಿಯಾಂಕಾ ಭಾರತ ಸಿನೆಮಾದಲ್ಲಿ ಮಿಂಚುತ್ತಿರುವ ಪ್ರತಿಭೆ. ಅದೇ ಹೊತ್ತಿಗೆ ಮಕ್ಕಳ ಮತ್ತು ಯುವಜನರ ಅಭಿಲಾಷೆಯನ್ನು ಈಡೇರಿಸುವಲ್ಲಿ ಅತ್ಯಂತ ಉತ್ಸುಕರಾಗಿದ್ದಾರೆ ಎಂದು ಹೇಳಿದರು.
ಪ್ರಿಯಾಂಕಾ ಈ ಕರ್ತವ್ಯಕ್ಕೆ ನೇಮಕಗೊಂಡಿರುವುದರಲ್ಲಿ ನಮಗೆ ಹಮ್ಮೆಯಿದೆ. ಜಗತ್ತಿನಲ್ಲಿ ಎಲ್ಲಾ ವಿಭಾಗದ ಮಕ್ಕಳಿಗೆ ಉತ್ತಮ ಸ್ಥಾನಮಾನ ದೊರಕುವ ವಿಶ್ವಾಸವಿದೆ ಎಂದವರು ಹೇಳಿದರು.