ಅಮೆರಿಕ ನೇತೃತ್ವದ ಮಿಲಿಟರಿ ಪಡೆ ಜೊತೆ ಕೈಜೋಡಿಸಿ ಇಸ್ಲಾಮ್ ವಿರುದ್ಧ ಹೋರಾಡಿದರೆ, ಸೌದಿ ಅರೇಬಿಯಾ ಸರಕಾರವನ್ನು ಉರುಳಿಸುವುದಾಗಿ ಅಲ್ ಖಾಯಿದಾದ ಯೆಮೆನಿ ಘಟಕ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಅಲ್ ಖಾಯಿದಾ ಅರೆಬಿಯನ್ ಪೆನಿನ್‌ಸುಲಾ(ಎಕ್ಯೂಎಪಿ)ದ ಉಪ ನಾಯಕ ಸಯೀದ್ ಅಲಿ ಅಲ್ ಶಿಹ್ರಿ ನೀಡಿರುವ ಎಚ್ಚರಿಕೆಯ ಸಂದೇಶವನ್ನು ಇಂಟರ್ನೆಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಕ್ಸಿನ್‌ಹುವಾ ವರದಿ ತಿಳಿಸಿದೆ.
ಸೌದಿ ಅರೆಬಿಯಾ ಸರಕಾರದಲ್ಲಿನ ಕೆಲವು ಆರ್ಮಿ ಸಿಬ್ಬಂದಿಗಳು ಯೆಮೆನ್‌ನಲ್ಲಿರುವ ಅಲ್ ಖಾಯಿದಾ ಕ್ಯಾಂಪ್ ಸೇರಲು ಆದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅಲ್ ಖಾಯಿದಾ ಗುಟ್ಟನ್ನು ರಟ್ಟು ಮಾಡಲು ಸೌದಿ ಅರೆಬಿಯಾ ಹೊರಟಿದೆ. ಆ ನಿಟ್ಟಿನಲ್ಲಿ ಸೌದಿ ಅರೆಬಿಯಾ ಅಮೆರಿಕ ನೇತೃತ್ವದ ಪಡೆ ಜತೆ ಸೇರಿ ಇಸ್ಲಾಮ್ ವಿರುದ್ಧ ಧರ್ಮ ಯುದ್ಧ ಹೂಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾನೆ.
ಹಾಗಾಗಿ ನಾವು ಸೌದಿ ರಾಜಮನೆತನ, ಸರಕಾರ, ರಕ್ಷಣೆ, ವೈಮಾನಿಕಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅಷ್ಟೇ ಅಲ್ಲ ಸೌದಿ ಅರೆಬಿಯಾ ಸರಕಾರವನ್ನು ಉರುಳಿಸಲು ನಾವು ಸಿದ್ದತೆ ನಡೆಸುತ್ತಿದ್ದೇವೆ ಎಂದು ಅಲ್ ಶಿಹ್ರಿ ಸಂದೇಶ ರವಾನಿಸಿದ್ದಾನೆ.