ಇತ್ತೀಚೆಗೆ ಭಾರತದ ಜಮ್ಮು-ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿರುವುದನ್ನು ಖಂಡಿಸಿರುವ ಜೆಯುಡಿ, ಈ ಬಗ್ಗೆ ಜೆಯುಡಿ ಸೇರಿದಂತೆ ನೂರಾರು ಪಾಕಿಸ್ತಾನಿಯರು ಭಾರತದ ವಿರುದ್ಧ ಪ್ರತಿಭಟನೆ ನಡೆಸಿದರು.
ನಮ್ಮ ದೇಶದ ಜನಪ್ರತಿನಿಧಿಗಳು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಮಾಯಕ ಜನರನ್ನು ಹತ್ಯೆಗೈಯುತ್ತಿರುವ ಅಂಶವನ್ನು ಗಮನಿಸಿದ್ದಾರೆ ಎಂದು ಜೆಯುಡಿ ಮುಖಂಡ ಅಬು ಅಲಿ ತಿಳಿಸಿದ್ದಾರೆ. ಅಲ್ಲದೇ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಭಾರತವೇ ಆಗಿದೆ ಎಂದು ಜೆಯುಡಿ ಆರೋಪಿಸಿದ್ದು, ಆ ನಿಟ್ಟಿನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಕಾಶ್ಮೀರದಲ್ಲಿಯೂ ಜನರ ಮೇಲಿನ ದಬ್ಬಾಳಿಕೆಯನ್ನು ಭಾರತ ಮುಂದುವರಿಸಿದೆ, ಹಾಗಾಗಿ ನಾವು ಗಡಿರೇಖೆಯನ್ನು ದಾಟಿ ನಮ್ಮ ಸಹೋದರರಿಗೆ ನೆರವು ನೀಡುತ್ತೇವೆ ಎಂದು ಪಾಕ್ ಆಕ್ರಮಿತ ಕಾಶ್ಮೀರದ ನಗರವಾದ ಮುಜಾಫರ್‌ಬಾದ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅಜಿಜ್ ಅಹ್ಮದ್ ಗಾಜಾಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮುಜಾಫರ್‌ಬಾದ್‌ನಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ಒಬ್ಸರ್‌ವರ್ ಮಿಷನ್ ಕಚೇರಿ ತನಕ ಮೆರವಣಿಗೆ ನಡೆಸಿ, ಭಾರತದ ವಿರುದ್ಧ ಘೋಷಣೆ ಕೂಗಿದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಭಾರತದ ಗೃಹ ಸಚಿವ ಪಿ.ಚಿದಂಬರಂ ಆರೋಪಿಸಿದ್ದರು. ಆದರೆ ವಿದೇಶಾಂಗ ಕಚೇರಿ ಈ ಆರೋಪವನ್ನು ತಳ್ಳಿಹಾಕಿದೆ.