ಸುಮಾರು 100ರಷ್ಟು ಅಮೆರಿಕಾ ಪ್ರಜೆಗಳು ಲೇಹ್‌ನಲ್ಲಿ ಹಠಾತ್ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ ಎಂದು ಹೇಳಿರುವ ಅಮೆರಿಕಾ, ಅವರಿಗೆ ಅಗತ್ಯ ಸಹಾಯಕ್ಕೆಂದು ನವದೆಹಲಿಯಲ್ಲಿರುವ ತಮ್ಮ ರಾಯಭಾರ ಕಚೇರಿಯು ಈಗಾಗಲೇ ಒಂದು ತಂಡವನ್ನು ಘಟನಾ ಸ್ಥಳಕ್ಕೆ ರವಾನಿಸಿದೆ ಎಂದಿದೆ.
ಭಾರತದಲ್ಲಿನ ದಿಢೀರ್ ನೆರೆಯಿಂದಾಗಿ ಸರಿಸುಮಾರು 100 ಅಮೆರಿಕನ್ನರು ತೊಂದರೆಗೆ ಸಿಲುಕಿದ್ದಾರೆ. ಇದುವರೆಗೆ ಯಾರೊಬ್ಬರೂ ಗಾಯಗೊಂಡಿರುವ ಬಗ್ಗೆ ಅಥವಾ ಸಾವನ್ನಪ್ಪಿರುವ ಕುರಿತು ಮಾಹಿತಿಗಳನ್ನು ನಾವು ಸ್ವೀಕರಿಸಿಲ್ಲ ಎಂದು ಅಮೆರಿಕಾ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೀ ತಿಳಿಸಿದ್ದಾರೆ.
ಪ್ರವಾಹಗಳು ಸಂಭವಿಸಿರುವ ಭಾರತದ ವಿವಿಧ ಪ್ರಾಂತ್ಯದಲ್ಲಿರುವ ನಮ್ಮ ಪ್ರಜೆಗಳ ಕ್ಷೇಮ ಮತ್ತು ಸುರಕ್ಷತೆಯ ಕುರಿತು ನಾವು ಭಾರತದ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಈ ಕುರಿತು ಮುತುವರ್ಜಿ ವಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಪ್ರವಾಹದಿಂದ ಸಂತ್ರಸ್ತರಾಗಿರುವ ಅಮೆರಿಕಾ ಪ್ರಜೆಗಳಿರುವ ಪ್ರದೇಶಕ್ಕೆ ಸಹಕಾರ ನೀಡಲೆಂದು ಲೇಹ್‌ಗೆ ಈಗಾಗಲೇ ದೆಹಲಿಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯಿಂದ ಅಧಿಕಾರಿಗಳನ್ನೊಳಗೊಂಡ ಒಂದು ತಂಡವನ್ನು ಕಳುಹಿಸಲಾಗಿದೆ. ಭಾರತದಲ್ಲಿ ಅಮೆರಿಕನ್ನರು ಪ್ರವಾಹದಿಂದಾಗಿ ಅತಿ ಹೆಚ್ಚು ಬಾಧೆಗೊಳಗಾಗಿರುವುದು ಲೇಹ್‌ನಲ್ಲಿ ಎಂದು ಅವರು ತಿಳಿಸಿದ್ದಾರೆ.