ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ನಾವು ಸಿದ್ಧ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಅದಕ್ಕಾಗಿ ನಿಖರವಾದ ಸಾಕ್ಷ್ಯ ಭಾರತ ಒದಗಿಸಬೇಕು ಎಂದು ರಾಗ ಹೊಸ ಎಳೆದಿದೆ.
ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಇದನ್ನು ಸ್ಪಷ್ಟಪಡಿಸಿದ್ದು, ಸಯೀದ್ ವಿರುದ್ಧ ಕ್ರಮಕ್ಕೆ ಬಲವಾದ ಸಾಕ್ಷ್ಯಕ್ಕೆ ಬೇಡಿಕೆಯಿರಿಸಿಕೊಂಡಿದ್ದಾರೆ.
ಪಾಕ್ ಸರಕಾರ ಹಲವು ಬಾರಿ ಹಫೀಜ್ ಸಯೀದ್‌ರನ್ನು ವಿಚಾರಣೆಗೆ ಒಳಪಡಿಸಿದೆ. ಆದರೆ ನಿಖರ ಸಾಕ್ಷ್ಯಾಧಾರಗಳಿಲ್ಲದ ಕಾರಣ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದೆ ಎಂದವರು ತಿಳಿಸಿದರು.
ಹಫೀಜ್ ಸಯೀದ್ ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ. ಮುಂಬೈನಲ್ಲಿ 2008 ನವೆಂಬರ್ 26ರಂದು ಸಂಭವಿಸಿದ ಭಯೋತ್ಪಾದನೆ ದಾಳಿಗಳ ಪ್ರಮುಖ ಆರೋಪಿ ಹಫೀಜ್ ಸಯೀದ್‌ರನ್ನು ಬಂಧಿಸಲಾಗಿತ್ತು. ಆದರೆ ಸಯೀದ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಅತನ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಲಾಹೋರ್ ಹೈಕೋರ್ಟ್ ವಜಾಗೊಳಿಸಿತ್ತು.