ತಾನು ಹಿಂದೂ ಧರ್ಮದ ತೀವ್ರ ಸೆಳೆತಕ್ಕೊಳಗಾಗಿದ್ದೆ ಎಂದು ಇತ್ತೀಚೆಗಷ್ಟೇ ಕ್ರೈಸ್ತ ಧರ್ಮವನ್ನು ತೊರೆದಿದ್ದ 'ಪ್ರೆಟ್ಟಿ ವುಮನ್' ಖ್ಯಾತಿಯ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಹೇಳಿದ್ದಾರೆ.
ಅಮೆರಿಕಾದ 'ಬೈಬಲ್ ಬೆಲ್ಟ್' ಎಂದೇ ಕರೆಯಲಾಗುವ ಜಾರ್ಜಿಯಾದಲ್ಲಿ ಕ್ಯಾಥೊಲಿಕ್ ತಾಯಿ ಮತ್ತು ಬ್ಯಾಪ್ತಿಸ್ಟ್ ತಂದೆಗೆ ಈ ಅಮೆರಿಕಾ ನಟಿ ಹುಟ್ಟಿದ್ದರು.
ತನ್ನ ಮುಂಬರುವ 'ಈಟ್ ಪ್ರೇ ಲವ್' ಸಿನಿಮಾದ ಚಿತ್ರೀಕರಣಕ್ಕೆಂದು ಭಾರತಕ್ಕೆ ಹೋದ ನಂತರ ತಾನು ಹಿಂದೂ ಧರ್ಮವನ್ನು ಪಾಲಿಸುತ್ತಿರುವುದಾಗಿ ಇತ್ತೀಚೆಗಷ್ಟೇ 'ಇಲ್ಲೆ' ಫ್ಯಾಷನ್ ಮ್ಯಾಗಜಿನ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಬರ್ಟ್ಸ್ ಒಪ್ಪಿಕೊಂಡಿದ್ದರು.
ತನ್ನ ಗಂಡ ಡ್ಯಾನಿ ಮಾಡರ್ ಹಾಗೂ ಮೂರು ಮಕ್ಕಳಾದ ಫಿನ್ನಾಸ್, ಹಜೆಲ್ ಮತ್ತು ಹೆನ್ರಿ ಜತೆಗೆ ದೇವಸ್ಥಾನಗಳಿಗೆ ಹೋಗುತ್ತಿದ್ದು, ಮಂತ್ರಗಳನ್ನು ಪಠಿಸುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.
ನಾನು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದೇನೆ. ಈ ಸಂಬಂಧ ಸಾಕಷ್ಟು ರೂಢಿಗಳನ್ನು ನಾನು ಅನುಸರಿಸುತ್ತಿದ್ದೇನೆ. ಹಿಂದೂ ಧರ್ಮವು ನನ್ನಲ್ಲಿ ವಿಶೇಷ ಸೆಳೆತವನ್ನು ಮತ್ತು ಅತಿಯಾದ ಆಕರ್ಷಣೆಯನ್ನು ಉಂಟು ಮಾಡಿತ್ತು ಎಂದು 'ಗುಡ್ ಮಾರ್ನಿಂಗ್ ಅಮೆರಿಕಾ' ಎಂಬ ಟೀವಿ ಕಾರ್ಯಕ್ರಮದಲ್ಲಿ ಇದೀಗ ತಿಳಿಸಿದ್ದಾರೆ.
1960ರ ದಶಕದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಕಡೆ ಆಕರ್ಷಿತರಾಗಿದ್ದ ದಿವಂಗತ ಜಾರ್ಜ್ ಹಾರಿಸನ್ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಜನಪ್ರಿಯ ವ್ಯಕ್ತಿ ರಾಬರ್ಟ್ಸ್ ಎಂದು ವರದಿಗಳು ಹೇಳಿವೆ.
ಹಿಂದೂ ಧರ್ಮದ ಕಡೆಗಿನ ಸೆಳೆತದ ಕುರಿತು ಮಾತನಾಡಿರುವ ರಾಬರ್ಟ್ಸ್, ತಾನು ಹಿಂದೂ ಧರ್ಮಗುರುವೊಬ್ಬರ ಭಾವಚಿತ್ರವನ್ನು ನೋಡಿದ ನಂತರ ನಂಬಿಕೆ ಭಿನ್ನಪಥವನ್ನು ಪಡೆದುಕೊಂಡಿತು ಎಂದಿದ್ದಾರೆ.
ಆ ವ್ಯಕ್ತಿಯ ಭಾವಚಿತ್ರವನ್ನು ನೋಡಿ ನಾನು ತೀವ್ರ ಆಸಕ್ತಳಾಗಿದ್ದೆ. ಆತ ಯಾರು, ಏನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದೇ ಇರಲಿಲ್ಲ. ಆದರೆ ಅವರ ಬಗ್ಗೆ ಗಾಢ ಆಸಕ್ತಿ ಬೆಳೆದಿತ್ತು. ಇದೇ ನನ್ನ ಜೀವನದಲ್ಲಿ ಹಿಂದೂ ಧರ್ಮ ಪ್ರವೇಶಿಸಲು ಹೇತುವಾಯಿತು ಎಂದು ವಿವರಣೆ ನೀಡಿದ್ದಾರೆ.
ವರದಿಗಳ ಪ್ರಕಾರ ಸಿನಿಮಾ ಚಿತ್ರೀಕರಣಕ್ಕಾಗಿ ಭಾರತಕ್ಕೆ ಬಂದಿದ್ದ ಆಕೆ, ಹರ್ಯಾಣದ ಹರಿ ಆಶ್ರಮ್ ಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸ್ವಾಮಿ ಧರಮ್ ದೇವ್ ಅವರು, ಜ್ಯೂಲಿಯಾ ಮಕ್ಕಳಿಗೆ ಮರು ನಾಮಕರಣಗೊಳಿಸಿದ್ದರು.