ಕಳೆದ ಫೆಬ್ರವರಿಯಿಂದೀಚೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶಗಳಲ್ಲಿ ಉಗಾಂಡಾದ ಎಲ್ಆರ್ಎ ಬಂಡುಕೋರರು ಕನಿಷ್ಠ 700 ನಾಗರಿಕರನ್ನು ಅಪಹರಿಸಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.
'ದಿ ಲಾರ್ಡ್ಸ್ ರೆಸಿಸ್ಟೆನ್ಸ್ ಆರ್ಮಿ' ಎಂದು ತನ್ನನ್ನು ತಾನು ಕರೆಸಿಕೊಂಡಿರುವ ಉಗ್ರಗಾಮಿ ಸಂಘಟನೆಯು 697ಕ್ಕೂ ಹೆಚ್ಚು ವಯಸ್ಕರು ಮತ್ತು ಮಕ್ಕಳನ್ನು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಮತ್ತು ಪಕ್ಕದಲ್ಲೇ ಇರುವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಉತ್ತರದಲ್ಲಿರುವ ಬಾಸ್-ಉಲೇ ಜಿಲ್ಲೆಯಿಂದ ಅಪಹರಿಸಿದೆ ಎಂದು 'ಹ್ಯೂಮನ್ ರೈಟ್ಸ್ ವಾಚ್' ಸಂಘಟನೆ ತನ್ನ ವರದಿಯಲ್ಲಿ ತಿಳಿಸಿದೆ.
ಅಪಹರಣಕ್ಕೊಳಗಾಗಿರುವವರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳೇ ಆಗಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಬಲವಂತವಾಗಿ ತಮ್ಮ ಯೋಧರನ್ನಾಗಿ ಅಥವಾ ಸಂಘಟನೆಯ ಹೋರಾಟಗಾರರ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಲಾಗುತ್ತಿದೆ ಎಂದೂ ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ.
ಅಪಹರಣಕ್ಕೊಳಗಾಗಿ ಮರಳಿರುವ 90 ಬಲಿಪಶುಗಳು ಸೇರಿದಂತೆ 520 ನಾಗರಿಕರನ್ನು ಜುಲೈ 12ರಿಂದ ಆಗಸ್ಟ್ 11ರ ನಡುವೆ ಎರಡು ದೇಶಗಳಲ್ಲಿ ಸಂದರ್ಶಿಸಿದ್ದ ಮಾನವ ಹಕ್ಕುಗಳ ಸಂಘಟನೆ, ತನ್ನ ತನಿಖಾ ವರದಿಯನ್ನು ಪ್ರಕಟಿಸಿದೆ.