ಚೀನಾದ ಆರ್ಥಿಕ ಪ್ರಗತಿಯ ಜತೆಗೆ ಕ್ರೈಸ್ತರ ಜನಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡು ಬಂದಿದೆ. ಸಮೀಕ್ಷೆಯೊಂದರ ಪ್ರಕಾರ 2010ರ ಹೊತ್ತಿಗೆ ದೇಶದಲ್ಲಿನ ಕ್ರಿಶ್ಚಿಯನ್ನರ ಜನಸಂಖ್ಯೆಯು 23.05 ಮಿಲಿಯನ್ ತಲುಪಲಿದೆ ಎಂದು ವರದಿಯೊಂದು ಹೇಳಿದೆ.
ಚೀನಾ ಕ್ರೈಸ್ತರ ಪೈಕಿ ಶೇ.73ರಷ್ಟು ಮಂದಿ 1993ರ ನಂತರ ಚರ್ಚುಗಳಿಗೆ ಸೇರಿಕೊಂಡಿದ್ದರು. ಅವರಲ್ಲಿ ಶೇ.18ರಷ್ಟು ಮಂದಿ 1982ರಲ್ಲಿ ಹಾಗೂ 1992ರಲ್ಲಿ ಸೇರ್ಪಡೆಯಾಗಿದ್ದರು.
ವಿಶ್ವ ಧರ್ಮಗಳ ಕುರಿತ ಸಾಮಾಜಿಕ ವಿಜ್ಞಾನಗಳ ಚೀನಾ ಅಕಾಡೆಮಿಯು ಬುಧವಾರ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಈ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.
ತಾವು ಅಥವಾ ತಮ್ಮ ಮನೆಯವರು ಅನಾರೋಗ್ಯಕ್ಕೊಳಗಾದ ನಂತರ ತಾವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡೆವು ಎಂದು ಶೇ.69ರಷ್ಟು ಮತಾಂತರಗೊಂಡ ಮಂದಿ ಹೇಳಿಕೊಂಡಿದ್ದಾರೆ ಎಂದು ಸಮೀಕ್ಷೆ ನಡೆಸಿದ ಲೀ ಲಿನ್ ವಿವರಣೆ ನೀಡಿದ್ದಾರೆ.
ಶೇ.15 ಕ್ರೈಸ್ತ ಮತಾನುಯಾಯಿಗಳ ಪ್ರಕಾರ ತಾವು ಕ್ರೈಸ್ತರಾಗಿರುವುದು ತಮ್ಮ ಕೌಟುಂಬಿಕ ಸಂಪ್ರದಾಯಗಳ ಪ್ರಭಾವದಿಂದಾಗಿ. ಅದೇ ಹೊತ್ತಿಗೆ ಕ್ರೈಸ್ತ ಮತಾನುಯಾಯಿಗಳಲ್ಲಿ ಲಿಂಗ ಅನುಪಾತ ಭೇದವಿರುವುದು ಕಂಡು ಬಂದಿದೆ. ಅಂದಾಜುಗಳ ಪ್ರಕಾರ ಕ್ರೈಸ್ತ ಮತಾನುಯಾಯಿಗಳಲ್ಲಿ ಶೇ.70ರಷ್ಟು ಮಹಿಳೆಯರು ಎಂದು ಚೀನಾದ ಪತ್ರಿಕೆಯೊಂದು ಲೀ ಹೇಳಿರುವುದನ್ನು ಉಲ್ಲೇಖಿಸಿ ವರದಿ ಮಾಡಿದೆ.