ಕಲ್ಲು ಹೊಡೆದು ಸಾಯಿಸಬೇಕೆಂದು ಇರಾನ್‌ನಿಂದ ತೀರ್ಪು ಪಡೆದುಕೊಂಡಿರುವ ಮಹಿಳೆ ತನ್ನ ಗಂಡನ ಹತ್ಯೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ರಾಷ್ಟ್ರದ ದೂರದರ್ಶನಕ್ಕೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಆದರೆ ಆಕೆ ಈ ರೀತಿ ತಪ್ಪೊಪ್ಪಿಗೆ ನೀಡುವ ಮೊದಲು ಸಾಕಷ್ಟು ಚಿತ್ರಹಿಂಸೆ ನೀಡಲಾಗಿತ್ತು ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.
ಎರಡು ಮಕ್ಕಳ ತಾಯಿ, 43ರ ಹರೆಯದ ಸಕಿನೇಹ್ ಮೊಹಮ್ಮದಿ ಅಸ್ತಿಯಾನಿ ಅವರ ವಕೀಲ ಹೌಟಾನ್ ಕಿಯಾನ್ ಎಂಬವರು ಈ ಆರೋಪ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇರಾನ್‌ನ ತಾಬ್ರಿಜ್ ಕಾರಾಗೃಹದಲ್ಲಿರುವ ಸಕಿನೇಹ್ ಅವರನ್ನು ಜೈಲಿನಲ್ಲೇ ಸಂದರ್ಶನ ನಡೆಸಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು.
ಕ್ಯಾಮರಾ ಮುಂದೆ ಬಂದು ತಪ್ಪೊಪ್ಪಿಗೆ ಹೇಳಿಕೆ ನೀಡುತ್ತೇನೆಂದು ಸಕಿನೇಹ್ ಒಪ್ಪಿಕೊಳ್ಳುವ ತನಕ ಆಕೆಯನ್ನು ಮನಬಂದಂತೆ ಥಳಿಸಿ, ಚಿತ್ರಹಿಂಸೆ ನೀಡಲಾಗಿತ್ತು ಎಂದು ಪತ್ರಿಕೆಯೊಂದಕ್ಕೆ ಕಿಯಾನ್ ತಿಳಿಸಿದ್ದಾರೆ.
ಆರೋಪಿಯ ಪರ ಮತ್ತೊಬ್ಬ ವಕೀಲ, ಮೊಹಮ್ಮದ್ ಮಸ್ತಾಫಿ ಎಂಬವರು ಇತ್ತೀಚೆಗಷ್ಟೇ ಇರಾನ್‌ನಿಂದ ನಾರ್ವೆಗೆ ಪರಾರಿಯಾಗಿದ್ದಾರೆ. ಅವರ ವಿರುದ್ಧ ಇರಾನ್ ಬಂಧನ ವಾರೆಂಟ್ ಹೊರಡಿಸಿದ ನಂತರ ಅವರು ತಪ್ಪಿಸಿಕೊಂಡಿದ್ದರು. ಆದರೆ ಅವರ ಪತ್ನಿಯನ್ನು ಇರಾನ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಸಕ್ತ ದೂರದರ್ಶನದಲ್ಲಿ ಪ್ರಸಾರವಾಗಿರುವ ತಪ್ಪೊಪ್ಪಿಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಸ್ತಾಫಿ, ಸರಕಾರವು ತಾನು ನೀಡುತ್ತಿರುವ ಶಿಕ್ಷೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡಿದೆ ಎಂದು ಆರೋಪಿಸಿದ್ದಾರೆ.
ಆರೋಪಿ ತನ್ನ ಗಂಡ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡಿದ ನಂತರ, ಇನ್ನೊಬ್ಬ ಕೊಂದು ಹಾಕಿದ್ದ. ಆದರೆ ಇಲ್ಲಿ ಕೊಲೆ ಆರೋಪದಿಂದ ಸಕಿನೇಹ್‌ಳನ್ನು ಮುಕ್ತಗೊಳಿಸಲಾಗಿತ್ತು. ಆದರೆ ವಿವಾಹೇತರ ಅಕ್ರಮ ಸಂಬಂಧದಲ್ಲಿ ಆಕೆಯನ್ನು ದೋಷಿಯನ್ನಾಗಿ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಸಕಿನೇಹ್‌ಳನ್ನು ಶಿಕ್ಷೆಗೆ ಗುರಿ ಪಡಿಸುವುದಾದಲ್ಲಿ ಮೊದಲು ಎದೆಮಟ್ಟದವರೆಗೆ ಹೂಳಲಾಗುತ್ತದೆ. ನಂತರ ಆಕೆಯತ್ತ ಕಲ್ಲುಗಳನ್ನು ಎಸೆದು ತೀವ್ರ ನೋವಿನಿಂದ ನರಳುವಂತೆ ಮಾಡಲಾಗುತ್ತದೆ. ಆದರೆ ತಕ್ಷಣ ಕೊಂದು ಹಾಕಲಾಗುವುದಿಲ್ಲ ಎಂದು ಇತ್ತೀಚೆಗಷ್ಟೇ ವರದಿಯೊಂದು ಹೇಳಿತ್ತು.