ಕೇವಲ ಹಿರಿಯ ಧಾರ್ಮಿಕ ಮುಖಂಡರು ಮಾತ್ರ ಫತ್ವಾಗಳು ಅಥವಾ ಇಸ್ಲಾಮಿಕ್ ಧಾರ್ಮಿಕ ಕಟ್ಟಳೆಗಳನ್ನು ಹೊರಡಿಸಲು ಅಧಿಕಾರ ಹೊಂದಿದ್ದಾರೆ ಎಂದು ಸೌದಿ ಅರೇಬಿಯಾ ದೊರೆ ಅಬ್ದುಲ್ಲಾ ಆಜ್ಞಾಪಿಸಿದ್ದಾರೆ.
ದೊರೆ ನೀಡಿರುವ ಆಜ್ಞೆಯ ಪ್ರಕಾರ, ಹಿರಿಯ ಉಲೇಮಾಗಳ ಸಮಿತಿಯ ಸದಸ್ಯರು ಮಾತ್ರ ಪ್ರಸಕ್ತ ಫತ್ವಾಗಳನ್ನು ಹೊರಡಿಸಲು ಅನುಮತಿ ನೀಡಲಾಗಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ.
ವಿಶ್ವದಾದ್ಯಂತದ ಮುಸ್ಲಿಮರು ಉಪವಾಸ ವ್ರತವನ್ನಾಚರಿಸುವ ಪವಿತ್ರ ರಂಜಾನ್ ಮೊದಲ ವಾರದಲ್ಲೇ ಇಂತಹ ಕಟ್ಟಳೆಯೊಂದು ಸೌದಿಯಿಂದ ಹೊರ ಬಂದಿದೆ.
ಫತ್ವಾಗಳನ್ನು ಹೊರಡಿಸಲು ಯಾರೆಲ್ಲ ಅರ್ಹತೆ ಪಡೆದುಕೊಂಡಿದ್ದಾರೆ ಎಂಬುದನ್ನು ಉಲೇಮಾಗಳ ಸಮಿತಿಯ ಮುಖ್ಯಸ್ಥರಾಗಿರುವ 'ಮುಫ್ತಿ'ಯವರು ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದೂ ಸೌದಿ ಚಕ್ರವರ್ತಿ ಹೇಳಿದ್ದಾರೆ.
ಈ ರೀತಿ ಮಿತಿಯನ್ನು ಹೇರುವುದು ಅಗತ್ಯವಾಗಿತ್ತು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಧಿಕೃತ ಧಾರ್ಮಿಕ ಸಂಸ್ಥೆಗಳನ್ನು ಧಿಕ್ಕರಿಸಿ ಯಾರೋ ಒಬ್ಬರು ತನಗಿಷ್ಟ ಬಂದಂತೆ ಫತ್ವಾಗಳನ್ನು ಹೊರಡಿಸುತ್ತಿರುವುದು ಸಾಮಾನ್ಯವಾಗುತ್ತಿದೆ. ಇದರಿಂದ ಸಾಕಷ್ಟು ವಿವಾದಗಳು ಮತ್ತು ಅಸಮಾಧಾನಗಳು ಮುಸ್ಲಿಮರ ನಡುವೆಯೇ ಉಂಟಾಗುತ್ತಿದೆ ಎಂದು ದೊರೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿಚಾರವನ್ನು ನಾವು ಹಲವು ಸಮಯದಿಂದ ಕೂಲಂಕಷವಾಗಿ ಗಮನಿಸಿ, ಉಲ್ಲಂಘನೆಗಳು ನಡೆಯುತ್ತಿರುವುದನ್ನು ಗುರುತು ಹಾಕಿಕೊಂಡಿದ್ದೆವು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯಬಾರದು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಧರ್ಮದ ಕುರಿತು ಸಂಘರ್ಷ ಸ್ಥಿತಿಗಳು ಹುಟ್ಟಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಮತ್ತು ಏಕತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಗತ್ಯವಾಗಿತ್ತು ಎಂದು ದೊರೆ ಹೇಳಿದ್ದಾರೆಂದು ವರದಿಗಳು ಹೇಳಿವೆ.