ಮುಸ್ಲಿಮೇತರರು 'ಅಲ್ಲಾಹ್' ಶಬ್ದ ಉಪಯೋಗಿಸಬಹುದು ಎಂಬ ಮಲೇಷ್ಯಾ ಕೋರ್ಟ್ ಆದೇಶದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಕ್ರಿಶ್ಚಿಯನ್ ಚರ್ಚ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶುಕ್ರವಾರ ಇಬ್ಬರು ಮುಸ್ಲಿಮ್ ಸಹೋದರರಿಗೆ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.
ಮುಸ್ಲಿಮ್ ಪ್ರಾಬಲ್ಯವುಳ್ಳ ಮಲೇಷ್ಯಾದಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮುದಾಯದ ನಡುವೆ ತಿಕ್ಕಾಟ ಆರಂಭವಾಗಿತ್ತು. ಇದರ ಪರಿಣಾಮವಾಗಿ ಕಳೆದ ಜನವರಿ ತಿಂಗಳಿನಲ್ಲಿ ಮುಸ್ಲಿಮರು ಚರ್ಚ್ ಮೇಲೆ ದಾಳಿ ನಡೆಸಿ, ಫೈಯರ್ ಬಾಂಬ್ ಎಸೆದಿದ್ದರು. 11 ಚರ್ಚ್, ಸಿಖ್ ಮಂದಿರ, ಮೂರು ಮಸೀದಿ ಹಾಗೂ ಮುಸ್ಲಿಮ್ ಪ್ರಾರ್ಥನಾ ಕೋಣೆಗಳು ದಾಳಿಗೆ ತುತ್ತಾಗಿದ್ದವು.
ಆ ನಿಟ್ಟಿನಲ್ಲಿ ಜನವರಿ 8ರಂದು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯ್ ಮುಸ್ಲಿಮ್ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿ,ವಿಚಾರಣೆ ಆರಂಭಗೊಂಡಿತ್ತು. ಚರ್ಚ್ ದಾಳಿಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕೌಲಾಲಂಪುರ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಕೋಮಥಿ ಸುಪ್ಪಯ್, ಧಾರ್ಮಿಕ ಪ್ರಾರ್ಥನಾ ಕೇಂದ್ರವನ್ನು ಬೆಂಕಿಹಚ್ಚಿ ಸುಟ್ಟಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ದೋಷಿ ಎಂದು ತೀರ್ಪು ನೀಡಿ, ಇಬ್ಬರಿಗೂ ತಲಾ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದರು.
ನಿಮ್ಮ ಕೃತ್ಯದಿಂದಾಗಿ ದೇಶಕ್ಕೂ ಮತ್ತು ಸಮಾಜಕ್ಕೂ ಅವಮಾನವಾಗಿದೆ. ನಿಮಗೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಒದಗಿಸುತ್ತಿರುವುದಾಗಿ ನ್ಯಾಯಾಧೀಶರು ತೀರ್ಪು ನೀಡುವ ಸಂದರ್ಭದಲ್ಲಿ ತಿಳಿಸಿದರು.