ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮೇಲೆ ಪಾಕಿಸ್ತಾನ ಮೂಲದ ಬ್ರಿಟನ್ ನಿವಾಸಿಯೊಬ್ಬ ಇತ್ತೀಚೆಗೆ ಆಕ್ರೋಶಗೊಂಡು ಶೂ ಎಸೆದಿದ್ದ. ಇದೀಗ ಜರ್ದಾರಿ ಬೆಂಬಲಿಗರು ಆತನಿಗೆ ಕೊಲೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಶೂ ಎಸೆದ ವ್ಯಕ್ತಿ ಅಡಗಿಕೊಂಡಿರುವುದಾಗಿ ವರದಿಯೊಂದು ತಿಳಿಸಿದೆ.
57ರ ಹರೆಯದ ಸರ್ದಾರ್ ಮೊಹಮ್ಮದ್ ಶಾಮಿನ್ ಖಾನ್ ಎಂಬ ವ್ಯಕ್ತಿ ಆಗೋಸ್ಟ್ 6ರಂದು ಜರ್ದಾರಿ ಅವರು ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಶೂ ಎಸೆದಿದ್ದ. ಆದರೆ ಶೂ ಜರ್ದಾರಿ ಅವರ ಮೇಲೆ ಬೀಳದೆ ಸಮೀಪದಲ್ಲೇ ಬಿದ್ದಿತ್ತು.
ಪಾಕಿಸ್ತಾನ ಭಯೋತ್ಪಾದಕರಿಗೆ ತರಬೇತಿ ನೀಡಿ ಅಫ್ಘಾನಿಸ್ತಾನ ಮತ್ತು ಭಾರತಕ್ಕೆ ರಫ್ತು ಮಾಡುತ್ತಿರುವುದಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಏತನ್ಮಧ್ಯೆಯೇ ಜರ್ದಾರಿ ಬ್ರಿಟನ್‌ಗೆ ಭೇಟಿ ನೀಡಿರುವುದನ್ನು ಪ್ರತಿಭಟಿಸಿ ಖಾನ್ ಶೂ ಎಸೆದಿದ್ದ.
ಅಲ್ಲದೇ ಪಾಕಿಸ್ತಾನದಲ್ಲಿ ನೆರೆಯಿಂದಾಗಿ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಜರ್ದಾರಿ ಬ್ರಿಟನ್‌ಗೆ ಭೇಟಿ ನೀಡುವ ಅಗತ್ಯವಾದರು ಏನಿತ್ತು ಎಂದು ಆಕ್ರೋಶಗೊಂಡು ಶೂ ಎಸೆದಿದ್ದ. ಇದೀಗ ಜರ್ದಾರಿ ಬೆಂಬಲಿಗರಿಂದ ಕೊಲೆ ಬೆದರಿಕೆ ಬಂದ ಪರಿಣಾಮ ಖಾನ್ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.
ಇಂತಹ ಪರಿಸ್ಥಿತಿಯಲ್ಲಿ ತಾನು ತನ್ನ ನಗರಕ್ಕೆ ವಾಪಸಾಗಲಾರೆ ಎಂಬುದು ಖಾನ್ ವಿವರಣೆ. ಪಾಕಿಸ್ತಾನದಲ್ಲಿಯೂ ತನ್ನ ಕುಟುಂಬಕ್ಕೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ. ಹಾಗಾಗಿ ಸದ್ಯ ತಾನು ತಲೆಮರೆಸಿಕೊಂಡು ಇರುವುದಾಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾನೆ.