ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ನೆರೆ ಸಂತ್ರಸ್ತರಿಗಾಗಿ ಉಗ್ರರಿಂದ ನಿರಾಶ್ರಿತ ಶಿಬಿರ (Militant groups | relief camps | flood victims | Pakistan)
Bookmark and Share Feedback Print
 
ಭಾರತದ ಮೇಲಿನ ದಾಳಿಗಳ ಆರೋಪ ಹೊತ್ತಿರುವ ಲಷ್ಕರ್ ಇ ತೋಯ್ಬಾ, ಜೈಶ್ ಇ ಮೊಹಮ್ಮದ್ ಮತ್ತು ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ಮುಂತಾದ ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿನ ನೆರೆ ಸಂತ್ರಸ್ತರಿಗಾಗಿ ನಿರಾಶ್ರಿತ ಶಿಬಿರಗಳನ್ನು ತೆರೆಯುತ್ತಿದ್ದು, ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿವೆ.

ತಮ್ಮ ಸಂಘಟನೆಗಳ ಮೇಲೆ ಸರಕಾರವು ನಿಷೇಧ ಹೇರಿರುವುದರಿಂದ ಬೇನಾಮಿ ಹೆಸರುಗಳ ಅಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಸಂಘಟನೆಗಳ ಅಧಿಕಾರಿ ವರ್ಗ ತಿಳಿಸಿದೆ.

2005ರಲ್ಲಿ ಭೀಕರ ಭೂಕಂಪ ಸಂಭವಿಸಿದಾಗಲೂ ಜನರ ನೆರವಿಗೆ ಧಾವಿಸಿದ್ದ ಈ ಸಂಘಟನೆಗಳು, ಸರಕಾರಕ್ಕಿಂತಲೂ ಹೆಚ್ಚು ಸಂಪನ್ಮೂಲವನ್ನು ಕ್ರೋಢೀಕರಿಸಿ ಜನತೆಯ ಮನಸ್ಸಿನಲ್ಲಿ ಅಗಾಧ ಪರಿಣಾಮ ಬೀರಿದ್ದವು.

ಇದೀಗ ಆ ಸಂಘಟನೆಗಳು ನೆರೆ ಸಂತ್ರಸ್ತರ ಕೈ ಹಿಡಿಯುತ್ತಿವೆ. ಅದಕ್ಕಾಗಿ ತಾವು ಮಿಲಿಯನ್‌ಗಟ್ಟಲೆ ರೂಪಾಯಿ ಹಣವನ್ನು ಸಂಗ್ರಹಿಸಿದ್ದೇವೆ. ಪರಿಹಾರ ನೀಡುತ್ತಿದ್ದೇವೆ, ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಸಂಘಟನೆಗಳು ಹೇಳಿರುವುದನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.

ಪ್ರವಾಹ ಸಂತ್ರಸ್ತರಿಗೆ, ಬದುಕುಳಿದವರಿಗೆ ಈ ಭಯೋತ್ಪಾದಕ ಸಂಘಟನೆಗಳು ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿವೆ.

2008ರ ಮುಂಬೈ ದಾಳಿ ರೂವಾರಿ ಜಮಾತ್ ಉದ್ ದಾವಾ, ಸಿಪಾಹ್ ಇ ಸಹಾಬಾ, ಹರ್ಕತುಲ್ ಮುಜಾಹಿದೀನ್, ಹಿಜ್ಬುತ್ ತಾಹ್ರಿರ್ ಮತ್ತು ಲಷ್ಕರ್ ಇ ಜಂಗ್ವಿ ಮುಂತಾದ ನಿಷೇಧಿತ ಸಂಘಟನೆಗಳು ಕೂಡ ನೆರೆ ಸಂತ್ರಸ್ತರ ಒಲವು ಗಿಟ್ಟಿಸಲು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿವೆ.

'ಫಲಾಹ್ ಇ ಇನ್ಸಾನಿಯತ್ ಫೌಂಡೇಷನ್ ಪಾಕಿಸ್ತಾನ್' ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಜಮಾತ್ ಉದ್ ದಾವಾ, ಕರಾಚಿಯಲ್ಲಿನ ಖಾಲಿದ್ ಬಿನ್ ವಾಲಿದಾ ರೋಡ್, ಗುಲ್ಶಾನ್ ಇ ಇಕ್ಬಾಲ್, ಗುಲ್ಸ್‌ತಾನ್ ಇ ಜಾಹರ್, ಲಾಂದಿ, ಕ್ಲಿಫ್ಟಾನ್, ಕೊರಂಗಿ ಮತ್ತಿತರ ಪ್ರದೇಶಗಳಲ್ಲಿ 29 ನಿರ್ವಸಿತರ ಶಿಬಿರಗಳನ್ನು ತೆರೆದಿದೆ ಎಂದು ಸಂಘಟನೆಯ ಕಾರ್ಯಕರ್ತನೊಬ್ಬ ತಿಳಿಸಿದ್ದಾನೆ.

ಈ ಬೆಳವಣಿಗೆಗಳೊಂದಿಗೆ ಸ್ವತಃ ಪಾಕಿಸ್ತಾನದೊಳಗೆ ದಾಳಿಗಳನ್ನು ನಡೆಸಿ ಕೆಟ್ಟ ಹೆಸರನ್ನು ಪಡೆದುಕೊಂಡಿದ್ದ ಈ ಸಂಘಟನೆಗಳು ಇದೀಗ ನೆರೆ ಪರಿಹಾರ ನೆಪದಲ್ಲಿ ಮತ್ತಷ್ಟು ಬಲಯುತವಾಗಲಿವೆ ಎಂದು ಅಂತಾರಾಷ್ಟ್ರೀಯ ವಲಯವು ಇದೀಗ ಭೀತಿ ವ್ಯಕ್ತಪಡಿಸಿತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ