ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ತುತ್ತಾಗಿರುವ ಅಫ್ಘಾನಿಸ್ತಾನದಲ್ಲಿ ಸುಮಾರು ಕ್ರಿ.ಶ. 5ನೇ ಶತಮಾನದ ಬೌದ್ಧ ವಿಹಾರವೊಂದು ದಕ್ಷಿಣ ಕಾಬೂಲ್‌ನಲ್ಲಿ ಪತ್ತೆಯಾಗಿರುವುದಾಗಿ ಭೂಗರ್ಭಶಾಸ್ತ್ರಜ್ಞರು ಮಂಗಳವಾರ ತಿಳಿಸಿದ್ದಾರೆ.
'ಆ ಸ್ಥಳದಲ್ಲಿ ಬೌದ್ಧ ವಿಹಾರ, ಸ್ತೂಪಾಗಳು, ಸುಂದರವಾದ ಕೋಣೆ ಹಾಗೂ ದೊಡ್ಡದಾದ ಮತ್ತು ಸಣ್ಣ ಮೂರ್ತಿಗಳು' ಅಲ್ಲಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಇದು ಸುಮಾರು 7.9 ಮೀಟರ್‌ನಷ್ಟು ಉದ್ದವಾಗಿದೆ ಎಂದು ಅಫ್ಘಾನ್ ಭೂಗರ್ಭಶಾಸ್ತ್ರ ಇಲಾಖೆ ಮುಖ್ಯಸ್ಥ ಮೊಹಮ್ಮದ್ ರಾಸೌಲಿ ವಿವರಿಸಿದ್ದಾರೆ.
ಇಲ್ಲಿ ದೊರೆತಿರುವ ಮಾಹಿತಿ ಪ್ರಕಾರ ಈ ಬೌದ್ಧ ವಿಹಾರ ಸುಮಾರು ಕ್ರಿ.ಶ 5ನೇ ಶತಮಾನದ್ದೆಂದು ಗುರುತಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಕಾಬೂಲ್‌ನಿಂದ ದಕ್ಷಿಣಕ್ಕೆ ಅನತಿ ದೂರದಲ್ಲಿರುವ ಲೋಗಾರ್ ಪ್ರಾಂತ್ಯದ ಆಯ್‌ನಾಕ್ ಪ್ರದೇಶದಲ್ಲಿ ಈ ಉತ್ಕನನ ಮಾಡಲಾಗಿದೆ. ಸುಮಾರು 12ಕಿಲೋ ಮೀಟರ್‌ವರೆಗೂ ಉತ್ಕನನ ನಡೆಸಲಾಗಿದೆ.
ಬೌದ್ಧ ವಿಹಾರದಲ್ಲಿನ ಅಮೂಲ್ಯ ಪರಿಕರಗಳನ್ನು ಕಳೆದ ವರ್ಷ ಸರಕಾರ ಉತ್ಕನನ ನಡೆಸುವುದಕ್ಕೆ ಮುನ್ನ ಕಳ್ಳಸಾಗಾಣಿಕೆದಾರರು ಲೂಟಿ ಮಾಡಿರುವುದಾಗಿ ರಾಸೌಲಿ ತಿಳಿಸಿದ್ದಾರೆ. 1996ರಿಂದ 2001ರವರೆಗೆ ತಾಲಿಬಾನ್ ಹಿಡಿತದಲ್ಲಿದ್ದ ಸಂದರ್ಭದಲ್ಲಿ ಉಗ್ರರು ಬಾಮಿಯಾನದಲ್ಲಿ ಬೌದ್ಧ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು.