ಪಾಕಿಸ್ತಾನಕ್ಕೆ ನೆರೆಯ ಭಾರತಕ್ಕಿಂತ ಅತಿ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿರುವುದು ಭಯೋತ್ಪಾದಕರು ಎಂದು ಪಾಕಿಸ್ತಾನದ ಪ್ರಮುಖ ಗುಪ್ತಚರ ಸಂಸ್ಥೆಯಾದ ಐಎಸ್ಐ ಹೇಳಿಕೆ ಕೊಟ್ಟ ಬೆನ್ನಲ್ಲೇ ಇದೀಗ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕೂಡ ಅದೇ ರಾಗ ಹಾಡಿದ್ದಾರೆ.
ನೆರೆಯ ಭಾರತ ದೇಶಕ್ಕಿಂತ ಭಯೋತ್ಪಾದಕರ ಬೆದರಿಕೆಯೇ ಪಾಕಿಸ್ತಾನಕ್ಕೆ ದೊಡ್ಡ ಕಂಟಕವಾಗಿದೆ ಎಂದು ಖುರೇಷಿ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಿವಾದಗಳನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಕಳೆದ ಹಲವು ದಶಕಗಳಿಂದ ಪಾಕಿಸ್ತಾನ, ತಮಗೆ ಭಾರತ ದೊಡ್ಡ ಕಂಟಕವಾಗಿದೆ ಎಂದು ಹುಯಿಲೆಬ್ಬಿಸುತ್ತಲೇ ಬಂದಿತ್ತು. ಇದೀಗ ಸುಮಾರು 63 ವರ್ಷಗಳ ನಂತರ ಮೊದಲ ಬಾರಿಗೆ, ಪಾಕಿಸ್ತಾನಕ್ಕೆ ದೊಡ್ಡ ಶತ್ರವಾಗಿರುವುದು ಉಗ್ರರೇ ವಿನಃ ಭಾರತವಲ್ಲ ಎಂದು ಐಎಸ್ಐ ಬಹಿರಂಗವಾಗಿ ಹೇಳಿತ್ತು.
'ಪಾಕಿಸ್ತಾನಕ್ಕೆ ಇಸ್ಲಾಮಿಕ್ ಭಯೋತ್ಪಾದಕರಿಂದಲೇ ಹೆಚ್ಚಿನ ಆತಂಕ ಎದುರಾಗಿದೆ ಎಂದು ಪಾಕಿಸ್ತಾನದ ಅತ್ಯಂತ ಪ್ರಭಾವಶಾಲಿ ಗುಪ್ತಚರ ಸಂಸ್ಥೆಯಾದ ಐಎಸ್ಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇತ್ತೀಚೆಗೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಬಹಿರಂಗಗೊಳಿಸಿತ್ತು.
ಇದೀಗ ಶಾ ಮೊಹಮ್ಮದ್ ಖುರೇಷಿ ಕೂಡ ಐಎಸ್ಐ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ, ಪಾಕಿಸ್ತಾನಕ್ಕೆ ನಿಜವಾದ ಬೆದರಿಕೆ ಇರುವುದು ಉಗ್ರರಿಂದಲೇ ಹೊರತು ಭಾರತವಲ್ಲ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದ್ದಾರೆ.