ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷಗಾದಿಗೆ ಏರಿ ಒಂದೂವರೆ ವರ್ಷ ಕಳೆದಿದೆ. ಏತನ್ಮಧ್ಯೆ ಪ್ರತಿ ಐವರು ಅಮೆರಿಕನ್‌ರಲ್ಲಿ ಒಬ್ಬರು ಬರಾಕ್ ಮುಸ್ಲಿಮ್ ಎಂಬ ನಿಲುವು ವ್ಯಕ್ತಪಡಿಸಿರುವ ಅಂಶವೊಂದು ನೂತನ ಸಮೀಕ್ಷೆಯಿಂದ ಹೊರಬಿದ್ದಿದೆ. ಅಲ್ಲದೇ ಬರಾಕ್ ಮುಸ್ಲಿಮ್ ಎಂದು ನಂಬುವವರ ಸಂಖ್ಯೆಯೂ ಹೆಚ್ಚಳವಾಗಿದೆ.
ಅಮೆರಿಕದ ಶೇ.18ರಷ್ಟು ಜನರು ಒಬಾಮಾ ಮುಸ್ಲಿಮ್ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಪೆವ್ ರಿಸರ್ಚ್ ಸೆಂಟರ್ ನಡೆಸಿರುವ ರಾಷ್ಟ್ರೀಯ ಸಮೀಕ್ಷೆಯಲ್ಲಿ ತಿಳಿಸಿದೆ. ಈ ಅಂಕಿ-ಅಂಶ 2009ರ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಗಿಂತ ಶೇ.9ರಷ್ಟು ಅಧಿಕವಾಗಿದೆ.
ಕೇವಲ ಶೇಕಡ 34ರಷ್ಟು ಅಮೆರಿಕನ್ ಪ್ರಜೆಗಳು ಒಬಾಮಾ ಕ್ರಿಶ್ಚಿಯನ್ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆದರೆ 2009ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.48ರಷ್ಟು ಜನ ಕ್ರಿಶ್ಚಿಯನ್ ಎಂದು ತಿಳಿಸಿದ್ದರು.
ಧರೆಗುರುಳಿದ ವರ್ಲ್ಡ್ ಟ್ರೇಟ್ ಸೆಂಟರ್ ಸಮೀಪ ಮಸೀದಿ ನಿರ್ಮಿಸಲು ತನ್ನಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಬರಾಕ್ ಒಬಾಮಾ ಬಹಿರಂಗವಾಗಿ ಹೇಳಿಕೆ ನೀಡಿದ ನಂತರ ಒಬಾಮಾ ಮುಸ್ಲಿಮ್ ಎಂದು ಭಾವಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಈ ಸಮೀಕ್ಷೆಯನ್ನು ಆಗೋಸ್ಟ್ ಮೊದಲ ವಾರದಲ್ಲಿ ಪೂರ್ಣಗೊಳಿಸಲಾಗಿತ್ತು.
ಆದರೆ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆ ಹೊಂದಿದ್ದು, ಅವರ ವಿರೋಧಿಗಳು ಬರಾಕ್ ವಿರುದ್ಧ ಅಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಬರಾಕ್ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ ಅಧ್ಯಕ್ಷರ ಗೌರವ ಮತ್ತು ನಂಬಿಕೆಯ ವಿರುದ್ಧ ವ್ಯವಸ್ಥಿತವಾಗಿ ಅಪ್ರಚಾರ ಮಾಡುವ ತಂತ್ರ ಎಂದು ಶ್ವೇತಭವನದ ಫೆಯಿತ್ ಸಲಹೆಗಾರ ಜೋಶುವಾ ಡು ಬೋಯಿಸ್ ಪ್ರತಿಕ್ರಿಯೆ ನೀಡಿದ್ದಾರೆ.
ಒಬಾಮಾ ಮುಸ್ಲಿಮ್ ಎಂದು ನಂಬುವವರ ಸಂಖ್ಯೆ ಹೆಚ್ಚಳವಾಗಿದ್ದು, ಅವರಲ್ಲಿ ರಿಪಬ್ಲಿಕನ್ಸ್ ಹೆಚ್ಚಾಗಿದ್ದಾರೆ, ಅದರಲ್ಲೂ ಕನ್ಸರ್ವೆಟಿವ್ ರಿಪಬ್ಲಿಕನ್ಸ್ ಸಂಖ್ಯೆ ಅಧಿಕವಾಗಿದೆ ಎಂದು ಸಮೀಕ್ಷೆ ವಿವರಿಸಿದೆ.