ಈ ವರ್ಷ ಸೆಪ್ಟೆಂಬರ್ 11ರ ಆಸುಪಾಸಿನಲ್ಲೇ ಈದ್-ಉಲ್-ಫಿತರ್ ಹಬ್ಬ ಬರಲಿರುವುದರಿಂದ ಆಚರಣೆ ಸಂದರ್ಭದಲ್ಲಿ ಇದು 2001ರ ಭಯೋತ್ಪಾದಕ ದಾಳಿಯ ಸಂಭ್ರಮಾಚರಣೆ ಎಂದು ತಪ್ಪಾಗಿ ತಿಳಿಯುವ ಸಾಧ್ಯತೆಗಳಿವೆ ಎಂದು ಅಮೆರಿಕಾದಲ್ಲಿನ ಇಸ್ಲಾಮಿಕ್ ಗುಂಪುಗಳು ಭೀತಿ ವ್ಯಕ್ತಪಡಿಸಿವೆ.
2001ರ ಸೆಪ್ಟೆಂಬರ್ 11ರಂದು ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ದಿನವನ್ನು ಪ್ರತಿ ವರ್ಷ ಕರಾಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ರಂಜಾನ್ ಸೆಪ್ಟೆಂಬರ್ 10 ಮತ್ತು 11ರಂದು ನಡೆಯಲಿದೆ. ಹೀಗಾಗಿ ಮುಸ್ಲಿಮರ ಮೇಲೆ ಅನಗತ್ಯ ಟೀಕೆಗಳು ಬರಬಹುದು ಎಂದು ಹೇಳಲಾಗುತ್ತಿದೆ.
ಆಕಸ್ಮಿಕವಾಗಿ ಅದೇ ಸಮಯದಲ್ಲಿ ನಮ್ಮ ಹಬ್ಬವೂ ಬಂದಿರುವುದರಿಂದ ಇಸ್ಲಾಂ ಧರ್ಮದತ್ತ ಈಗಾಗಲೇ ಇರುವ ಶಂಕೆ ಮತ್ತು ಹಗೆತನ ಭಾವನೆಗಳು ಮತ್ತಷ್ಟು ಹೆಚ್ಚಬಹುದು ಎಂದು ಕೆಲವು ಮುಸ್ಲಿಂ ಸಂಘಟನೆಗಳು ಭೀತಿ ಹೊಂದಿವೆ.
ವಿಶ್ವ ವಾಣಿಜ್ಯ ಕೇಂದ್ರವಿದ್ದ ಸ್ಥಳದಲ್ಲಿ ಮಸೀದಿ ಅಥವಾ ಮುಸ್ಲಿಮರ ಪ್ರಾರ್ಥನಾ ಕೇಂದ್ರವೊಂದನ್ನು ನಿರ್ಮಿಸುವ ಪರ ಒಲವು ವ್ಯಕ್ತಪಡಿಸಿರುವ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ನನ್ನ ಹೇಳಿಕೆಯನ್ನು ಒಪ್ಪಿಗೆ ಎಂದು ಪರಿಗಣಿಸಬೇಕಾಗಿಲ್ಲ ಎಂದು ಅದರ ಬೆನ್ನಿಗೆ ಒಬಾಮಾ ಹೇಳಿದ್ದರೂ, ಟೀಕಾಕಾರರು ಗುರಿ ಮಾಡುವುದನ್ನು ಬಿಟ್ಟಿಲ್ಲ. ಅದೇ ಹೊತ್ತಿಗೆ ಮತ್ತೊಂದು ಸುತ್ತಿನ ಸಂಘರ್ಷ ವಾತಾವರಣ ಹಬ್ಬದ ಸಂದರ್ಭದಲ್ಲಿ ಸೃಷ್ಟಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಹಲವು ಮುಸ್ಲಿಂ ಸಂಘಟನೆಗಳು, ತಮ್ಮ ಹಬ್ಬದ ಆಚರಣೆ ದಿನವನ್ನು ಸೆಪ್ಪೆಂಬರ್ 12ಕ್ಕೆ ಮುಂದೂಡಲು ನಿರ್ಧರಿಸಿವೆ. ಸೆಪ್ಟೆಂಬರ್ 11ರಂದು ಸಾವಿರಾರು ಮಂದಿ ಸಾವನ್ನಪ್ಪಿದ ದಿನವಾಗಿರುವುದರಿಂದ, ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ. ಅದೇ ಹೊತ್ತಿಗೆ ಈ ನಿರ್ಧಾರಕ್ಕೆ ಕೆಲವರಿಂದ ವಿರೋಧವೂ ವ್ಯಕ್ತವಾಗಿದೆ.