ಕಾಶ್ಮೀರ ಪ್ರತ್ಯೇಕವಾದಿಗಳು ತಮ್ಮ ಅಂತಿಮ ಗುರಿಯನ್ನು ಸಾಧಿಸುವವರೆಗೆ ಪಾಕಿಸ್ತಾನ ತನ್ನ ನೈತಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ಮುಂದುವರಿಸುವುದಾಗಿ ಗುರುವಾರ ಘೋಷಿಸಿದೆ.
ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಡುತ್ತಿರುವ ಕಾಶ್ಮೀರಿ ಜನರು ಅದಕ್ಕಾಗಿ ಕೊನೆಯವರೆಗೂ ತಮ್ಮ ಪ್ರಾಣವನ್ನು ಕೊಟ್ಟಾದರು ಹೋರಾಡುತ್ತಾರೆ ಎಂಬ ಬಲವಾದ ನಂಬಿಕೆ ನಮ್ಮದು. ಅಲ್ಲದೇ, ಅವರು ಗುರಿ ಮುಟ್ಟವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿದೇಶಾಂಗ ಕಚೇರಿಯ ವಕ್ತಾರ ಅಬ್ದುಲ್ ಬಾಸಿಟ್ ವೀಕ್ಲಿ ನ್ಯೂಸ್‌ಗೆ ತಿಳಿಸಿರುವುದಾಗಿ ಹೇಳಿದೆ.
'ಕಾಶ್ಮೀರಿ ಯುವಕರು ಹಿಂಸಾಚಾರವನ್ನು ಕೈಬಿಡಬೇಕು, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಅಬ್ದುಲ್ ಅವರು ಪ್ರತಿಕ್ರಿಯೆ ನೀಡಿ, ಜಮ್ಮು-ಕಾಶ್ಮೀರ ಜನರು ತಮ್ಮ ಸ್ವಯಂ ಸ್ವಾಯತ್ತತೆಗಾಗಿ ಹೋರಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಭಾರತದ ಭದ್ರತಾ ಪಡೆಗಳು ಅಲ್ಲಿನ ಹೋರಾಟಗಾರರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ದೂರಿದ್ದಾರೆ.
ಆ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಜನರ ಹೋರಾಟಕ್ಕೆ ಸರಕಾರ ಮತ್ತು ಪಾಕಿಸ್ತಾನದ ಜನರು ನೈತಿಕವಾಗಿ ಮತ್ತು ರಾಜತಾಂತ್ರಿಕವಾಗಿ ಪೂರ್ಣ ಪ್ರಮಾಣದ ಬೆಂಬಲವನ್ನು ನೀಡುವ ಇಚ್ಛೆ ಹೊಂದಿರುವುದಾಗಿ ಪುನರುಚ್ಚರಿಸಿದರು.