ನವೆಂಬರ್ ತಿಂಗಳಲ್ಲಿ ಭಾರತ ಮತ್ತು ಇತರ ಏಷಿಯಾ ರಾಷ್ಟ್ರಗಳಿಗೆ ಪ್ರವಾಸ ಮಾಡಲಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರವಾಸ ಪಟ್ಟಿಗೆ ಪಾಕಿಸ್ತಾನದ ಹೆಸರನ್ನು ಸೇರಿಸುವ ಕುರಿತು ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಶ್ವೇತಭವನ ತಿಳಿಸಿದೆ.
ಏಷಿಯಾ ಪ್ರವಾಸದ ಸಂದರ್ಭದಲ್ಲಿ ಅಧ್ಯಕ್ಷರು ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆಗಳು ಇವೆಯೇ ಎಂಬ ಪ್ರಶ್ನೆಗೆ ಶ್ವೇತಭವನದ ಮಾಧ್ಯಮ ಉಪ ಕಾರ್ಯದರ್ಶಿ ಬಿಲ್ ಬರ್ಟನ್, ಈ ಸಂಬಂಧ ನಾನು ಯಾವುದೇ ಮಾತುಕತೆಯ ಕುರಿತು ನನಗೆ ತಿಳಿದಿಲ್ಲ ಎಂದಿದ್ದಾರೆ.
ಒಬಾಮಾ ಅವರು ನವೆಂಬರ್ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಆದರೆ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಯುತ್ತಿರುವ ಪಾಕಿಸ್ತಾನ ಪ್ರವಾಸದ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ.
ಅದೇ ಹೊತ್ತಿಗೆ ಪಾಕಿಸ್ತಾನವು ಪ್ರವಾಹದಿಂದ ಜರ್ಜರಿತವಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನೂ ಅಮೆರಿಕಾ ನೀಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ಬರ್ಟನ್ ತಿಳಿಸಿದ್ದಾರೆ.
ನಾವು ಈಗಾಗಲೇ ಹತ್ತಾರು ಮಿಲಿಯನ್ ಡಾಲರ್ ಆರ್ಥಿಕ ಸಹಕಾರವನ್ನು ನೀಡಿದ್ದೇವೆ. ಅಮೆರಿಕಾದ ಹೆಲಿಕಾಪ್ಟರುಗಳು ಮತ್ತು ನಾಲ್ಕು ಇಂಜಿನ್‌ಗಳನ್ನು ಹೊಂದಿರುವ ಸಿ-130 ಮಿಲಿಟರಿ ಸರಕು ಸಾಗಣೆ ವಿಮಾನವು ಸಾವಿರಾರು ಕೇಜಿ ತೂಕದ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ವಿತರಿಸಿದ್ದೇವೆ. ಪಾಕಿಸ್ತಾನ ಸರಕಾರ ಮಾಡುವ ಎಲ್ಲಾ ಮನವಿಗಳಿಗೂ ನಾವು ಸ್ಪಂದಿಸುತ್ತಿದ್ದೇವೆ ಎಂದು ಅವರು ವಿವರಣೆ ನೀಡಿದ್ದಾರೆ.