ಭಾರತದ ಜತೆಗಿನ ಮಾತುಕತೆಗಾಗಿ ತನ್ನ ನೆಲದಲ್ಲಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸೇರಿದಂತೆ ಯಾವುದೇ ರೀತಿಯ ಪೂರ್ವಷರತ್ತುಗಳನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ ಎಂದಿರುವ ಪಾಕಿಸ್ತಾನ, ಮುಂದಿನ ಹೆಜ್ಜೆಯನ್ನು ನಿರ್ಧರಿಸುವ ಸಂಪೂರ್ಣ ಸ್ವಾತಂತ್ರ್ಯ ನವದೆಹಲಿಯ ಕೈಯಲ್ಲಿದೆ ಎಂದು ಹೇಳಿದೆ.
ನಮ್ಮ ನಿಲುವು ಸ್ಪಷ್ಟವಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆ ಪುನರಾರಂಭಕ್ಕೆ ಯಾವುದೇ ರೀತಿಯ ಪೂರ್ವ ಷರತ್ತುಗಳಿಗೆ ನಾವು ಸಿದ್ಧರಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿತ್ ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು ಪಾಕಿಸ್ತಾನವು ತನ್ನ ನೆಲದಿಂದ ನಿರ್ದೇಶಿಸಲ್ಪಡುತ್ತಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಬಾಸಿತ್, ಪಾಕಿಸ್ತಾನವು ನಿರ್ದಿಷ್ಟ ನಿರ್ದೇಶನವುಳ್ಳ ಮತ್ತು ಫಲಿತಾಂಶವನ್ನು ಸಾಧಿಸುವ ಮಾತುಕತೆಯನ್ನು ನೋಡಲು ಬಯಸುತ್ತಿದೆ ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆಯುವ ಸಂದರ್ಭದಲ್ಲಿ ನಮ್ಮೆದುರು ಇರುವ ಪ್ರಮುಖ ಅಂಶವೆಂದರೆ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಮತ್ತು ಫಲಿತಾಂಶಗಳನ್ನು ಪಡೆಯುವುದು. ಇದಕ್ಕೆ ಯಾವುದೇ ರೀತಿಯ ಪೂರ್ವ ಷರತ್ತುಗಳು ಸಲ್ಲದು ಎಂದು ಅವರು ಹೇಳಿದರು.
ಜುಲೈ 15ರಂದು ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಸಚಿವರುಗಳು ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸಿರುವುದನ್ನು ಉಲ್ಲೇಖಿಸಿರುವ ಅವರು, ಈ ಸಂದರ್ಭದಲ್ಲಿ ಮುಂದಿನ ಮಾತುಕತೆಗಳ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಉಭಯರು ಸಾಧ್ಯವಾಗಿಲ್ಲ ಎಂದಿದ್ದಾರೆ.
ಮಾತುಕತೆ ಪುನರಾರಂಭಿಸುವ ಬಗ್ಗೆ ಚೆಂಡು ಭಾರತದ ಅಂಗಳದಲ್ಲೇ ಇದೆ. ಹಾಗಾಗಿ ಭಾರತವೇ ನಮ್ರತೆಯನ್ನು ಪ್ರದರ್ಶಿಸಿ ಮಾತುಕತೆ ಮುಂದುವರಿಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.