ಭಾರತಕ್ಕೆ ಅಭಿನಂದನೆ-ನೆರವು ಸ್ವೀಕರಿಸುತ್ತೇವೆ: ಪಾಕಿಸ್ತಾನ
ವಾಷಿಂಗ್ಟನ್, ಶುಕ್ರವಾರ, 20 ಆಗಸ್ಟ್ 2010( 10:16 IST )
ಪಾಕಿಸ್ತಾನದಲ್ಲಿನ ನೆರೆ ಸಂತ್ರಸ್ತರಿಗೆ ಐದು ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವ ಭಾರತದ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಬೆನ್ನಲ್ಲೇ, ಭಾರತದ ನೆರವನ್ನು ಪಾಕಿಸ್ತಾನ ಸ್ವೀಕರಿಸುವುದಾಗಿ ತಿಳಿಸಿದೆ. ಅಲ್ಲದೇ ಭಾರತದ ಈ ನೆರವು ಶ್ಲಾಘನೀಯವಾದದ್ದು ಎಂದು ಅಭಿನಂದಿಸಿದೆ.
'ದೇಶದ ನೆರೆ ಸಂತ್ರಸ್ತರಿಗೆ ಭಾರತ ಸರಕಾರ ನೀಡಲು ಉದ್ದೇಶಿಸಿರುವ ಐದು ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ಪಾಕ್ ಸರಕಾರ ಸ್ವೀಕರಿಸುವುದಾಗಿ' ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ತಿಳಿಸಿದ್ದಾರೆ.
ಯುನೈಟೆಡ್ ನೇಷನ್ಸ್ ಕೇಂದ್ರ ಕಚೇರಿಯಲ್ಲಿ ನಡೆದ ಪಾಕಿಸ್ತಾನದ ಜನರಲ್ ಅಸೆಂಬ್ಲಿಯ ವಿಶೇಷ ಅಧಿವೇಶನದಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಭಾರತ ನೀಡುವ ನೆರವನ್ನು ಪಾಕಿಸ್ತಾನ ಸ್ವೀಕರಿಸುವುದಿಲ್ಲ ಎಂಬ ಹೇಳಿಕೆಗೆ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಬುದ್ದಿ ಮಾತು ಹೇಳಿತ್ತು. ಆಪತ್ತಿನ ಸಮಯದಲ್ಲಿ ರಾಜಕೀಯ ಮುಖ್ಯವಲ್ಲ, ನೆರವನ್ನು ಪಾಕಿಸ್ತಾನ ಸ್ವೀಕರಿಸುತ್ತದೆ ಎಂಬ ನಿರೀಕ್ಷೆ ಅಮೆರಿಕದ್ದಾಗಿದೆ ಎಂದು ಗುರುವಾರ ಹೇಳಿಕೆ ನೀಡಿತ್ತು.
ಇದೀಗ ದೇಶದ ನೆರೆ ಸಂತ್ರಸ್ತರಿಗೆ ಭಾರತ ಐದು ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಿರುವುದಕ್ಕೆ ಖುರೇಷಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಭಾರತ ನೆರೆ ಸಂತ್ರಸ್ತರಿಗೆ ನೀಡಿರುವ ನೆರವಿನ ಬಗ್ಗೆ ಯಾವುದೇ ರಾಜಕೀಯ ಚದುರಂಗದಾಟ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಯಾವುದೇ ರಾಜಕೀಯ ನಡೆಸಿಲ್ಲ. ಪಾಕಿಸ್ತಾನದಲ್ಲಿನ ಪ್ರವಾಹ ದುರಂತಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ನನಗೆ ದೂರವಾಣಿ ಕರೆ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದ್ದರು. ಪ್ರವಾಹದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದರು. ಅದೇ ರೀತಿ ಪಾಕಿಸ್ತಾನಕ್ಕೆ ನೆರವು ನೀಡುವ ಕುರಿತು ತಿಳಿಸಿದ್ದರು ಎಂದು ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.