ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಸ್ಲಿಮ್ ಎಂಬುದಾಗಿ ಬಹುತೇಕ ಅಮೆರಿಕನ್‌ರು ಸಂದೇಹ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅದಕ್ಕೆ ಸ್ಪಷ್ಟನೆ ನೀಡಿರುವ ಶ್ವೇತಭವನ, ಬರಾಕ್ ಅವರು ಕ್ರಿಶ್ಚಿಯನ್ ವಿನಃ ಮುಸ್ಲಿಮ್ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರತಿ ಐವರು ಅಮೆರಿಕನ್‌ರಲ್ಲಿ ಒಬ್ಬರು ಬರಾಕ್ ಮುಸ್ಲಿಮ್ ಎಂಬ ನಿಲುವು ವ್ಯಕ್ತಪಡಿಸಿರುವ ಅಂಶವೊಂದು ನೂತನ ಸಮೀಕ್ಷೆಯಿಂದ ಹೊರಬಿದ್ದಿತ್ತು. ಅಲ್ಲದೇ ಬರಾಕ್ ಮುಸ್ಲಿಮ್ ಎಂದು ನಂಬುವವರ ಸಂಖ್ಯೆಯೂ ಹೆಚ್ಚಳವಾಗಿತ್ತು.
ಅಮೆರಿಕದ ಶೇ.18ರಷ್ಟು ಜನರು ಒಬಾಮಾ ಮುಸ್ಲಿಮ್ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಪೆವ್ ರಿಸರ್ಚ್ ಸೆಂಟರ್ ನಡೆಸಿರುವ ರಾಷ್ಟ್ರೀಯ ಸಮೀಕ್ಷೆಯಲ್ಲಿ ತಿಳಿಸಿತ್ತು. ಈ ಅಂಕಿ-ಅಂಶ 2009ರ ಮಾರ್ಚ್‌ನಲ್ಲಿ ನಡೆಸಿದ ಸಮೀಕ್ಷೆಗಿಂತ ಶೇ.9ರಷ್ಟು ಅಧಿಕವಾಗಿರುವುದಾಗಿಯೂ ವಿವರಣೆ ನೀಡಿತ್ತು.
ಕೇವಲ ಶೇಕಡ 34ರಷ್ಟು ಅಮೆರಿಕನ್ ಪ್ರಜೆಗಳು ಒಬಾಮಾ ಕ್ರಿಶ್ಚಿಯನ್ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆದರೆ 2009ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.48ರಷ್ಟು ಜನ ಕ್ರಿಶ್ಚಿಯನ್ ಎಂದು ತಿಳಿಸಿದ್ದರು.
ಈ ಸಮೀಕ್ಷೆ ಹೊರಬಿದ್ದ ನಂತರ ಶ್ವೇತಭವನದ ವಕ್ತಾರ ಬಿಲ್ ಬರ್ಟೋನ್ ಅವರು ಸಮಾಜಾಯಿಷಿ ನೀಡಿ, ಬರಾಕ್ ಒಬಾಮಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ. ಅದರಲ್ಲಿ ಯಾವುದೇ ಗೊಂದಲದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬರಾಕ್ ಕ್ರಿಶ್ಚಿಯನ್ ಎಂಬುದರಲ್ಲಿ ಅನುಮಾನವೇ ಬೇಡ. ಅವರು ದಿನಂಪ್ರತಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.