ಬ್ರಿಟನ್‌ಗೆ ಸಾಗಿಸಲ್ಪಟ್ಟ ವೇಶ್ಯೆಯರಲ್ಲಿ ಚೀನೀಯರೇ ಹೆಚ್ಚು
ಲಂಡನ್, ಶುಕ್ರವಾರ, 20 ಆಗಸ್ಟ್ 2010( 16:09 IST )
ಬ್ರಿಟನ್‌ಗೆ ಅಕ್ರಮವಾಗಿ ಸಾಗಿಸಲ್ಪಟ್ಟು ಬಲವಂತದಿಂದ ವೇಶ್ಯಾವಾಟಿಕೆ ನಡೆಸುತ್ತಿರುವವರಲ್ಲಿ ಸರಿಸುಮಾರು ಅರ್ಧದಷ್ಟು ಯುವತಿಯರು ಚೀನಾ ರಾಷ್ಟ್ರೀಯರು ಎಂದು ಪೊಲೀಸ್ ವರದಿಯೊಂದು ಹೇಳಿದೆ.
ಬ್ರಿಟನ್ ಪೊಲೀಸ್ ಅಧ್ಯಯನ ವರದಿಯ ಪ್ರಕಾರ 30,000 ವೇಶ್ಯೆಯರಲ್ಲಿ 17,000 ಮಂದಿ ವಲಸೆಗಾರರು. ಅವರಲ್ಲಿ ಅತೀ ಹೆಚ್ಚು ಮಂದಿ ಚೀನಾ, ಥಾಯ್ಲೆಂಡ್ ಮತ್ತು ಪೂರ್ವ ಯೂರೋಪ್‌ನಿಂದ ಬಂದವರು ಎಂದು ಹೇಳಲಾಗಿದೆ.
ಸೆಕ್ಸ್ ಉದ್ಯಮಕ್ಕೆ ತಳ್ಳಲ್ಪಡುವ ಮಹಿಳೆಗೆ 30,000 ಪೌಂಡುಗಳನ್ನು ಕ್ರಿಮಿನಲ್ ಗ್ಯಾಂಗುಗಳು ನೀಡುತ್ತವೆ ಎಂದು ಇಂತಹ ಸುಮಾರು 200ಕ್ಕೂ ಹೆಚ್ಚು ಮಹಿಳೆಯರನ್ನು ಮಾತನಾಡಿಸಿ ತಯಾರಿಸಿದ ವರದಿಯಲ್ಲಿ ಪೊಲೀಸ್ ತನಿಖಾಗಾರರು ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಅತೀ ಹೆಚ್ಚು ವೇಶ್ಯಾಗೃಹಗಳಿರುವುದು ಲಂಡನ್‌ನಲ್ಲಿ. ಇಲ್ಲಿ 2,103, ಯಾರ್ಕ್‌ಶೈರ್-ಹಂಬರ್‌ನಲ್ಲಿ 534, ಸೌತ್ ಈಸ್ಟ್‌ನಲ್ಲಿ 426 ಹಾಗೂ ವೆಸ್ಟ್ ಮಿಡ್ಲೆಂಡ್ಸ್‌ನಲ್ಲಿ 342 ವೇಶ್ಯಾಗೃಹಗಳಿವೆ.
ಆಗ್ನೇಯ ಏಷಿಯಾದಿಂದ ಬ್ರಿಟನ್‌ಗೆ ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಿರುವ ಮಹಿಳೆಯರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನಾವು ಅಧ್ಯಯನ ನಡೆಸಿದ ಸಂದರ್ಭದಲ್ಲಿ ಗಮನಕ್ಕೆ ಬಂದಿರುವಂತೆ ಬಹುಸಂಖ್ಯೆಯಲ್ಲಿ ಕಳ್ಳಸಾಗಣಿಕೆಗೊಳಗಾಗಿರುವ ಮಹಿಳೆಯರು ಚೀನೀಯರು ಎಂಬುದು ಭೀತಿ ಹುಟ್ಟಿಸಿದೆ ಎಂದು ಪೊಲೀಸ್ ಅಧಿಕಾರಿ ಕ್ರಿಸ್ ಇಯರ್ ತಿಳಿಸಿದ್ದಾರೆ.
ವೇಶ್ಯಾವಾಟಿಕೆ ಕ್ಷೇತ್ರದಲ್ಲಿ ನಲುಗುತ್ತಿರುವ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಚೀನಾ ಮತ್ತು ಬ್ರಿಟನ್ ಸರಕಾರಗಳು ಮಾತುಕತೆ ನಡೆಸುತ್ತಿವೆ. ಈ ಸಂಬಂಧ ಅತ್ಯುತ್ತಮ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳುವ ನಿರೀಕ್ಷೆಗಳಿವೆ ಎಂದು ಬ್ರಿಟನ್ ತಿಳಿಸಿದೆ.